ಉದಯವಾಹಿನಿ, ಅಹಮದಾಬಾದ್‌: ದೇಶೀಯ ಕ್ರಿಕೆಟ್‌ಗೆ ಮರಳಲು ರವೀಂದ್ರ ಜಡೇಜಾ ಸಜ್ಜಾಗಿದ್ದಾರೆ ಎಂದು ವರದಿಯಾಗಿದೆ. ಸ್ಟಾರ್ ಆಲ್‌ರೌಂಡರ್ ಅಕ್ಟೋಬರ್ 25 ರಂದು ರಾಜ್‌ಕೋಟ್‌ನಲ್ಲಿ ಪ್ರಾರಂಭವಾಗುವ ಮಧ್ಯಪ್ರದೇಶ ವಿರುದ್ಧದ ಎರಡನೇ ಸುತ್ತಿನ ರಣಜಿ ಟ್ರೋಫಿ ಪಂದ್ಯದಲ್ಲಿ ಸೌರಾಷ್ಟ್ರ ಪರ ಆಡುವ ಸಾಧ್ಯತೆಯಿದೆ.
ಇತ್ತೀಚೆಗೆ ಕರ್ನಾಟಕ ವಿರುದ್ಧದ ಸೌರಾಷ್ಟ್ರದ ಆರಂಭಿಕ ಪಂದ್ಯದಲ್ಲಿ ಸ್ಪಿನ್ನರ್‌ಗಳಿಗೆ ಸಾಕಷ್ಟು ಸಹಾಯ ಮಾಡಿದ ಅದೇ ರಾಜ್‌ಕೋಟ್ ಪಿಚ್‌ನಲ್ಲಿ ನಡೆಯಲಿರುವ ತವರಿನ ಪಂದ್ಯಕ್ಕೆ ಜಡೇಜಾ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಏಕದಿನ ತಂಡದಲ್ಲಿ ಆಯ್ಕೆಯಾಗದ ಜಡೇಜಾ, ಮುಂದಿನ ತಿಂಗಳು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಗೆ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಲು ರಣಜಿ ಆಡುವ ಸಾಧ್ಯತೆ ಇದೆ. ಜಡೇಜಾ ರಣಜಿ ಪಂದ್ಯದಲ್ಲಿ ಆಡುವ ನಿರೀಕ್ಷೆಯಿದೆ ಎಂದು ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​(ಎಸ್‌ಸಿಎ) ಅಧಿಕಾರಿಯೊಬ್ಬರು ಕ್ರಿಕ್‌ಬಜ್‌ಗೆ ತಿಳಿಸಿದ್ದಾರೆ.
ಪ್ರಸ್ತುತ ಟೆಸ್ಟ್ ಆಲ್‌ರೌಂಡರ್‌ಗಳಲ್ಲಿ ಅಗ್ರಸ್ಥಾನದಲ್ಲಿರುವ 36 ವರ್ಷದ ಜಡೇಜಾ, ಕಳೆದ ಋತುವಿನಲ್ಲಿ ಅಸ್ಸಾಂ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಕೊನೆಯ ಬಾರಿಗೆ ಆಡಿದ್ದರು. ಆ ಋತುವಿನಲ್ಲಿ ಅವರು ಎರಡು ಪಂದ್ಯಗಳನ್ನು ಆಡಿದ್ದರು. ದೆಹಲಿ ವಿರುದ್ಧದ ಪಂದ್ಯದಲ್ಲಿ 38 ರನ್, 66ಕ್ಕೆ ಐದು ಮತ್ತು 38ಕ್ಕೆ ಏಳು ವಿಕೆಟ್‌ ಕಿತ್ತು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಜಡೇಜಾ ಸೌರಾಷ್ಟ್ರ ಪರ ಒಟ್ಟಾರೆ 47 ರಣಜಿ ಪಂದ್ಯಗಳಲ್ಲಿ, 57.60 ಸರಾಸರಿಯಲ್ಲಿ 3,456 ರನ್ ಗಳಿಸಿದ್ದಾರೆ ಮತ್ತು 208 ವಿಕೆಟ್‌ಗಳನ್ನು ಪಡೆದಿದ್ದಾರೆ.

ಸೌರಾಷ್ಟ್ರ ತಂಡ
ಜಯದೇವ್ ಉನದ್ಕತ್ (ನಾಯಕ), ಹಾರ್ವಿಕ್ ದೇಸಾಯಿ (ವಿ.ಕೀ.), ತರಂಗ್ ಗೊಹೆಲ್, ರವೀಂದ್ರ ಜಡೇಜಾ, ಯುವರಾಜ್‌ಸಿನ್ಹ್ ದೋಡಿಯಾ, ಸಮ್ಮರ್ ಗಜ್ಜರ್, ಅರ್ಪಿತ್ ವಾಸವಾದ, ಚಿರಾಗ್ ಜಾನಿ, ಪ್ರೇರಕ್ ಮಂಕಡ್, ಧರ್ಮೇಂದ್ರಸಿನ್ಹ್ ಜಡೇಜಾ, ಚೇತನ್ ಸಕರಿಯಾ, ಅಂಶ್ ಗೋಸಾಯಿ, ಜಯ್ ಗೋಹಿಲ್, ಪಾರ್ಥ್ ಭುತ್, ಕೆವಿನ್ ಜೀವರಾಜನಿ, ಹೆತ್ವಿಕ್ ಕೊಟಕ್, ಅಂಕುರ್ ಪನ್ವಾರ್.

Leave a Reply

Your email address will not be published. Required fields are marked *

error: Content is protected !!