ಉದಯವಾಹಿನಿ, ನವದೆಹಲಿ: ಛತ್ ಪೂಜೆ ಹಿನ್ನೆಲೆ ಜನದಟ್ಟಣೆಯನ್ನು ನಿಭಾಯಿಸಲು ನಿಯಮಿತ ರೈಲು ಸೇವೆಗಳೊಂದಿಗೆ ಮುಂದಿನ ನಾಲ್ಕು ದಿನ 1,205 ವಿಶೇಷ ರೈಲುಗಳು ಸಂಚರಿಸಲಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಛತ್ ಪೂಜೆಗೂ ಮುನ್ನ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದ್ದು, ರೈಲ್ವೆ ಇಲಾಖೆ ಪ್ರಯಾಣಿಕರ ಸುರಕ್ಷತೆ ಮತ್ತು ಸುಗಮ ಪ್ರಯಾಣಕ್ಕಾಗಿ ಸಿದ್ಧತೆಯನ್ನು ಕೈಗೊಂಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ “ಸ್ಟೇಷನ್‌ಗಳಲ್ಲಿ ಪ್ರಯಾಣಿಕರ ಕ್ರಮಬದ್ಧ ಪ್ರವೇಶಕ್ಕಾಗಿ “ಹೋಲ್ಡಿಂಗ್ ಮತ್ತು ವೇಟಿಂಗ್ ಏರಿಯಾ”ಗಳನ್ನು ನಿರ್ಮಿಸಲಾಗಿದೆ. ಅಲ್ಲದೇ ಹಬ್ಬದ ಪ್ರಯಾಣ ದಟ್ಟಣೆಯನ್ನು ನಿಭಾಯಿಸಲು ಸುಮಾರು 10,700 ಕಾಯ್ದಿರಿಸಿದ ಹಾಗೂ 3,000 ರಿಸರ್ವೇಶನ್ ಅಲ್ಲದ ರೈಲುಗಳು ಕಾರ್ಯನಿರ್ವಹಿಸಲಿವೆ,” ಎಂದಿದ್ದಾರೆ.
ನವದೆಹಲಿಯ ರೈಲ್ವೆ ಬೋರ್ಡ್‌ನ ವಾರ್ ರೂಮ್‌ಗೆ ಭೇಟಿ ನೀಡಿ, ಪ್ರಯಾಣಿಕರ ಚಲನವಲನ ಪರಿಶೀಲಿಸಿದ ಸಚಿವರು, “ವಿಭಾಗ, ವಲಯ ಮತ್ತು ರೈಲ್ವೆ ಬೋರ್ಡ್ ಮಟ್ಟದಲ್ಲಿ ವಾರ್ ರೂಮ್‌ಗಳನ್ನು ಸ್ಥಾಪಿಸಲಾಗಿದ್ದು, ಬೋರ್ಡ್‌ಗೆ ಎಲ್ಲಾ ಸ್ಥಳಗಳಿಂದ ನೇರ ಮಾಹಿತಿ ಲಭ್ಯವಾಗುತ್ತಿವೆ,” ಎಂದರು.
ಪ್ರಮುಖ ನಿಲ್ದಾಣಗಳಲ್ಲಿ ಚಿಕ್ಕ ನಿಯಂತ್ರಣ ಕೊಠಡಿಗಳನ್ನು ಸಹ ಸ್ಥಾಪಿಸಲಾಗಿದ್ದು, ಈ ವ್ಯವಸ್ಥೆ ದೇಶದಾದ್ಯಂತ ಪ್ರತಿಯೊಂದು ನಿಲ್ದಾಣದ ಸ್ಥಿತಿ, ಹೆಚ್ಚುವರಿ ರೈಲುಗಳ ಅಗತ್ಯತೆ, ಮತ್ತು ಕಾರ್ಯಾಚರಣೆಯ ಇತರೆ ಅಂಶಗಳನ್ನು ನೇರವಾಗಿ ಸಂಯೋಜಿಸಲು ಸಹಾಯಕವಾಗಿವೆ ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
