ಉದಯವಾಹಿನಿ, ನವದೆಹಲಿ:  ಭಾರತದ ಸೇನಾ ಪಡೆಗಳ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಅವರು ಭಾರತ ಬಾಹ್ಯಾಕಾಶ ವಲಯದಲ್ಲಿ ರಕ್ಷಣಾ ಮತ್ತು ದಾಳಿಯ ಸಾಮರ್ಥ್ಯ ಗಳಿಸಿಕೊಳ್ಳಬೇಕು ಎಂದು ಇಂಡಿಯನ್ ಸ್ಪೇಸ್ ಅಸೋಸಿಯೇಷನ್ ನವದೆಹಲಿಯಲ್ಲಿ ಎಪ್ರಿಲ್ ತಿಂಗಳಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಕರೆ ನೀಡಿದ್ದರು. ಚೌಹಾಣ್ ಅವರು ಬಾಹ್ಯಾಕಾಶದಲ್ಲಿ ಆಯುಧ ಅಳವಡಿಸುವ ಪ್ರಕ್ರಿಯೆ ಸತತವಾಗಿ ಮುಂದುವರಿದಿದ್ದು, ಇದರಿಂದಾಗಿ ಬಾಹ್ಯಾಕಾಶದಲ್ಲೂ ಯುದ್ಧ ನಡೆಯುವ ಸಾಧ್ಯತೆಗಳಿವೆ ಎಂದಿದ್ದಾರೆ. ಅವರು ಬಾಹ್ಯಾಕಾಶ ಅಭಿವೃದ್ಧಿ ಭೂಮಿ, ಸಮುದ್ರ ಮತ್ತು ಗಾಳಿಯಲ್ಲಿ ನಡೆಯುವ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸಬಲ್ಲದು ಎಂದಿದ್ದಾರೆ. ಅವರು ಭಾರತ ತನ್ನ ಬಾಹ್ಯಾಕಾಶ ವಲಯದ ವೆಚ್ಚವನ್ನು ಕಡಿಮೆಗೊಳಿಸಲು ಮತ್ತು ಬಾಹ್ಯಾಕಾಶ ಸಾಮರ್ಥ್ಯ ವೃದ್ಧಿಸಲು ಉಪಗ್ರಹಗಳ ಗಾತ್ರವನ್ನು ಕಿರಿದಾಗಿಸುವ ನಿಟ್ಟಿನಲ್ಲಿ ಮತ್ತು ಮರುಬಳಕೆ ಮಾಡಬಲ್ಲ ಉಡಾವಣಾ ವೇದಿಕೆಗಳ ನಿರ್ಮಾಣದಲ್ಲಿ ಕಾರ್ಯಾಚರಿಸಬೇಕು ಎಂದಿದ್ದಾರೆ.

                                                              ಬಾಹ್ಯಾಕಾಶ ಆಯುಧಗಳ ಅಭಿವೃದ್ಧಿ ನಡೆಸುವ ಈ ಓಟದಲ್ಲಿ ಭಾರತ ಯಾವ ಕಾರಣಕ್ಕೂ ಹಿಂದುಳಿಯಬಾರದು ಎಂದವರು ಕರೆ ನೀಡಿದ್ದಾರೆ. ಭಾರತದ ವಾಯುಸೇನಾ ಮುಖ್ಯಸ್ಥ, ಏರ್ ಚೀಫ್ ಮಾರ್ಷಲ್ ವಿ ಆರ್ ಚೌಧರಿ ಅವರು ಭಾರತ ಪೂರ್ಣ ಪ್ರಮಾಣದ ಬಾಹ್ಯಾಕಾಶ ಮಿಲಿಟರಿ ಸಿದ್ಧಾಂತವನ್ನು ಅಭಿವೃದ್ಧಿ ಪಡಿಸಬೇಕು ಎಂದಿದ್ದಾರೆ. ಅವರು ಹೆಚ್ಚುತ್ತಿರುವ ಬಾಹ್ಯಾಕಾಶ ಆಯುಧೀಕರಣ ಮತ್ತು ಬಾಹ್ಯಾಕಾಶ ಸ್ಪರ್ಧೆಯ ಕುರಿತು ಪ್ರತಿಕ್ರಿಯಿಸುತ್ತಿದ್ದರು. ಅವರು ಭಾರತ ಅಮೆರಿಕಾ ಮತ್ತು ಫ್ರಾನ್ಸ್‌ಗಳ ರೀತಿಯಲ್ಲಿ ಏರ್ ಪವರ್ ಆಗಿರುವುದಕ್ಕಿಂತ ಹೆಚ್ಚು ಏರೋಸ್ಪೇಸ್ ಪವರ್ ಆಗುವ ಕಡೆ ಗಮನ ಹರಿಸಬೇಕು ಎಂದು ಕರೆ ನೀಡಿದ್ದಾರೆ. ಚೀನಾ ಈಗಾಗಲೇ ಬಾಹ್ಯಾಕಾಶ ವಲಯದಲ್ಲಿ ಸಾಕಷ್ಟು ಅಭಿವೃದ್ಧಿ ಸಾಧಿಸಿದ್ದು, ಶತ್ರುಗಳ ಉಪಗ್ರಹಗಳನ್ನು ನಾಶ ಮಾಡುವ ಸಾಮರ್ಥ್ಯ ಗಳಿಸಿದೆ ಎಂದು ಅವರು ಹೇಳಿದ್ದಾರೆ. ಚೌಧರಿ ಅವರು ವಿಶೇಷವಾಗಿ ಚೀನಾ ಕಳೆದ ಮೂರು – ನಾಲ್ಕು ವರ್ಷಗಳ ಅವಧಿಯಲ್ಲಿ ತನ್ನ ಉಪಗ್ರಹಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿದ್ದು, ಈಗ ಬಹುತೇಕ 700 ಉಪಗ್ರಹಗಳನ್ನು ಹೊಂದಿದೆ ಎಂದರು.

Leave a Reply

Your email address will not be published. Required fields are marked *

error: Content is protected !!