ಉದಯವಾಹಿನಿ, ಭಾರತವು ಸಾಂಸ್ಕೃತಿಕ ಪರಂಪರೆ ಮತ್ತು ವೈವಿಧ್ಯಮಯ ಪಾಕಶೈಲಿಯ ನಾಡಾಗಿದೆ. ಪ್ರತಿಯೊಂದು ರಾಜ್ಯವೂ ತನ್ನದೇ ಆದ ವಿಶಿಷ್ಟ ಸುವಾಸನೆ, ರುಚಿ ಮತ್ತು ಸಂಪ್ರದಾಯವನ್ನು ಹೊಂದಿದೆ. ಹಬ್ಬದ ಸಮಯದಲ್ಲಿ ಮನೆಮನೆಗಳಿಂದ ಹರಡುವ ಸಿಹಿತಿಂಡಿಗಳ ಪರಿಮಳವು ಭಾರತೀಯ ಸಂಸ್ಕೃತಿಯ ವೈಭವವನ್ನು ತೋರಿಸುತ್ತದೆ. ಇಂತಹ ಸಿಹಿತಿಂಡಿಗಳಲ್ಲಿ ಒಡಿಶಾದ ಧಾರಾಕ್ಷಿ ಒಂದು ವಿಶಿಷ್ಟವಾದ ತಿನಿಸು, ಇದು ಸ್ಥಳೀಯರಿಗೆ ಮಾತ್ರವಲ್ಲ, ಅದರ ರುಚಿಯನ್ನು ಒಮ್ಮೆ ಸವಿದವರಿಗೂ ಅಚ್ಚುಮೆಚ್ಚಾಗುತ್ತದೆ.
ಧಾರಾಕ್ಷಿ ಎಂದರೇನು? ಧಾರಾಕ್ಷಿ (ಅಥವಾ ಧಾರಕ್ಯ) ಒಡಿಶಾದ ಪಾರಂಪರಿಕ ಸಿಹಿತಿಂಡಿ. ಇದನ್ನು ಸಾಮಾನ್ಯವಾಗಿ ಹಬ್ಬಗಳು ಮತ್ತು ಶುಭ ಸಂದರ್ಭಗಳಲ್ಲಿ ತಯಾರಿಸಲಾಗುತ್ತದೆ, ವಿಶೇಷವಾಗಿ ದೀಪಾವಳಿ ಮತ್ತು ಹೋಳಿ ವೇಳೆ. ಈ ಸಿಹಿತಿಂಡಿ ತನ್ನ ಕುರುಕುತನ ಮತ್ತು ರಸಭರಿತ ಒಳಭಾಗದಿಂದಲೇ ಜನಪ್ರಿಯವಾಗಿದೆ. ರಸಗುಲ್ಲಾ, ಪಿಠಾ ಮುಂತಾದ ಪ್ರಸಿದ್ಧ ಒಡಿಯಾ ಸಿಹಿತಿಂಡಿಗಳ ಜೊತೆಗೆ ಧಾರಾಕ್ಷಿಯು ಕೂಡ ಸ್ಥಳೀಯ ಪಾಕಪದ್ಧತಿಯ ಅವಿಭಾಜ್ಯ ಅಂಗವಾಗಿದೆ.
ಧಾರಾಕ್ಷಿ ತಯಾರಿಸುವ ಹಂತಗಳು: ಬೇಳೆ ನೆನೆಸುವುದು: ಮೂರು-ನಾಲ್ಕು ಗಂಟೆಗಳ ಕಾಲ ಹೆಸರುಬೇಳೆ ಮತ್ತು ಕಡಲೆಬೇಳೆಯನ್ನು ನೀರಲ್ಲಿ ನೆನೆಸಿಡಿ. ನಂತರ ಸಿಪ್ಪೆ ತೆಗೆದು ಸ್ವಚ್ಛವಾಗಿ ತೊಳೆದು ಪಕ್ಕಕ್ಕೆ ಇರಿಸಿ. ಸಕ್ಕರೆ ಪಾಕ ತಯಾರಿ: ಒಲೆಯ ಮೇಲೆ ಕಡಾಯಿ ಇಟ್ಟು 2 ಕಪ್ ಸಕ್ಕರೆ ಮತ್ತು 1½ ಕಪ್ ನೀರು ಸೇರಿಸಿ ಮಧ್ಯಮ ಉರಿಯಲ್ಲಿ ಕುದಿಯಲು ಬಿಡಿ. ಪಾಕ ಗಟ್ಟಿಯಾಗದಂತೆ ನೋಡಿಕೊಳ್ಳಿ. ನಂತರ ಏಲಕ್ಕಿ ಪುಡಿ ಮತ್ತು ನಿಂಬೆ ರಸ ಸೇರಿಸಿ, ಪ್ಯಾನ್ ಮುಚ್ಚಿ ಪಾಕವನ್ನು ತಣ್ಣಗಾಗಲು ಬಿಡಿ.
ಹಿಟ್ಟಿನ ತಯಾರಿ: ತೊಳೆದ ಬೇಳೆಗಳನ್ನು ಮಿಕ್ಸರ್‌ನಲ್ಲಿ ಹಾಕಿ ಸ್ವಲ್ಪ ಉಪ್ಪು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಹಿಟ್ಟು ಮೃದುವಾಗಿದ್ದು ಗಟ್ಟಿಯಾಗಬಾರದು. ಅಗತ್ಯವಿದ್ದರೆ ಸ್ವಲ್ಪ ನೀರು ಸೇರಿಸಬಹುದು.
ಹುರಿಯುವುದು: ಎಣ್ಣೆ ಬಿಸಿ ಮಾಡಿದ ಬಳಿಕ, ಹಿಟ್ಟನ್ನು ಹಾಲಿನ ಪ್ಯಾಕೆಟ್ ಅಥವಾ ಸಾಸ್ ಬಾಟಲ್‌ನಿಂದ ಎಣ್ಣೆಗೆ ಬಿಟ್ಟು ಉದ್ದ ಆಕಾರದಲ್ಲಿ ಹುರಿಯಿರಿ. ಚಿನ್ನದ ಬಣ್ಣಕ್ಕೆ ತಿರುಗುವವರೆಗೆ ಹುರಿದುಕೊಳ್ಳಿ.
ಪಾಕದಲ್ಲಿ ಮುಳುಗಿಸುವುದು: ಹುರಿದ ತುಂಡುಗಳನ್ನು ಬಿಸಿ ಸಕ್ಕರೆ ಪಾಕದಲ್ಲಿ 10 ಸೆಕೆಂಡ್‌ಗಳ ಕಾಲ ಮುಳುಗಿಸಿ ನಂತರ ಹೊರತೆಗೆದು ತಟ್ಟೆಯಲ್ಲಿ ಇರಿಸಿ. ಪಾಕವು ಒಳಗೆ ಹೀರಿಕೊಳ್ಳುವುದರಿಂದ ಧಾರಾಕ್ಷಿ ರಸಭರಿತವಾಗುತ್ತದೆ.
