ಉದಯವಾಹಿನಿ, ಛತ್ತರ್‌ಪುರ: ಮಹಿಳಾ ಬೌನ್ಸರ್‌ಗಳು ಜಾತ್ರೆಯಲ್ಲಿ ಜನರೊಂದಿಗೆ ಅನುಚಿತವಾಗಿ ವರ್ತಿಸಿ, ಬೆಲ್ಟ್‌ನಿಂದ ಹಲ್ಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ. ಮಹಿಳಾ ಬೌನ್ಸರ್‌ಗಳ ವರ್ತನೆಗೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಇಬ್ಬರು ಮಹಿಳಾ ಬೌನ್ಸರ್‌ಗಳು ಕೋಪಗೊಂಡು, ಜನರನ್ನು ಬೆಲ್ಟ್‌ನಿಂದ ಹೊಡೆಯುವುದನ್ನು ವಿಡಿಯೊದಲ್ಲಿ ಕಾಣಬಹುದು. ಇದು ಅವರ ನಡುವೆ ಜಗಳಕ್ಕೆ ಕಾರಣವಾಯಿತು. ಮತ್ತೊಂದು ವಿಡಿಯೊದಲ್ಲಿ, ಇಬ್ಬರು ಮಹಿಳಾ ಬೌನ್ಸರ್‌ಗಳು, ಒಬ್ಬ ವ್ಯಕ್ತಿಯನ್ನು ಅವನ ಟಿ-ಶರ್ಟ್ ಹಿಡಿದು ಹೊರಗೆ ಎಳೆಯುತ್ತಿರುವುದು ಕಂಡುಬಂದಿದೆ. ಪೊಲೀಸ್ ಮಧ್ಯಪ್ರವೇಶಿಸಿ ಎಲ್ಲರನ್ನೂ ಬೇರ್ಪಡಿಸುವವರೆಗೂ ಗಲಾಟೆ ಮುಂದುವರೆಯಿತು. ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಯಿತು. ಈ ಜಗಳ ಯಾಕಾಗಿ ನಡೆದಿದೆ ಎಂಬ ಬಗ್ಗೆ ಕಾರಣ ತಿಳಿದುಬಂದಿಲ್ಲ. ಮಹಿಳಾ ಬೌನ್ಸರ್‌ಗಳು ತಮ್ಮ ಕೆಲಸ ಮತ್ತು ಲಿಂಗವನ್ನು ದುರುಪಯೋಗಪಡಿಸಿಕೊಂಡು ಪುರುಷರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮಾಹಿತಿಯ ಪ್ರಕಾರ, ಛತ್ತರ್‌ಪುರದಲ್ಲಿ ಆಯೋಜಿಸಲಾದ ಜಲ ವಿಹಾರ್ ಮೇಳದಲ್ಲಿ ಈ ಘಟನೆ ನಡೆದಿದೆ.
