ಉದಯವಾಹಿನಿ, ಲಖನೌ: ಆಗ್ರಾ–ಲಕ್ನೋ ಎಕ್ಸ್‌ಪ್ರೆಸ್‌ವೇನಲ್ಲಿ ಸಂಭವಿಸಿದ ಅಪಘಾತದಲ್ಲಿ ಉತ್ತರ ಪ್ರದೇಶದ ಕ್ಯಾಬಿನೆಟ್ ಮಿನಿಸ್ಟರ್ ಬೇಬಿ ರಾಣಿ ಮೌರ್ಯ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿದ ಟ್ರಕ್ ಸಚಿವರ ಕಾರಿಗೆ ಡಿಕ್ಕಿ ಹೊಡದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಿಳಾ ಕಲ್ಯಾಣ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಮೌರ್ಯ ಅವರು ಹತ್ರಾಸ್‌ನಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಲಕ್ನೋಗೆ ಹಿಂದಿರುಗುತ್ತಿದ್ದ ವೇಳೆ ಫಿರೋಜಾಬಾದ್‌ ಬಳಿ ಅಪಘಾತ ಸಂಭವಿಸಿದೆ.
ರಾತ್ರಿ 8.40 ಸುಮಾರಿಗೆ ಸಚಿವರ ಕಾರಿನ ಮುಂದೆ ಚಲಿಸುತ್ತಿದ್ದ ಟ್ರಕ್‌ನ ಟೈರ್ ಏಕಾಏಕಿ ಸ್ಫೋಟಗೊಂಡ ನಂತರ ಚಾಲಕನ ನಿಯಂತ್ರಣ ತಪ್ಪಿದ ಟ್ರಕ್ ಸ್ಕಿಡ್ ಆಗಿ ಸಚಿವೆ ಮೌರ್ಯ ಅವರ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ಸಿರ್ಸಗಂಜ್ ಉಪವಿಭಾಗಾಧಿಕಾರಿ ಅನಿವೇಶ್ ಕುಮಾರ್ ತಿಳಿಸಿದ್ದಾರೆ.
ವರದಿಗಳ ಪ್ರಕಾರ, ರಾಣಿ ಮೌರ್ಯ ಅವರ ಚಾಲಕ ಸಮಯೋಚಿತವಾಗಿ ಪ್ರತಿಕ್ರಿಯಿಸಿ ಕಾರನ್ನು ನಿಯಂತ್ರಣಕ್ಕೆ ತಂದರಾದರೂ ಸಹ, ಟ್ರಕ್ ಡಿಕ್ಕಿಯಿಂದಾಗಿ ವಾಹನಕ್ಕೆ ಗಂಭೀರ ಹಾನಿಯಾಗಿದೆ. ಆದಾಗ್ಯೂ, ಮೌರ್ಯ ಅವರಿಗೆ ಯಾವುದೇ ಗಾಯಗಳಾಗಿಲ್ಲ. ಬಳಿಕ ಮತ್ತೊಂದು ವಾಹನದಲ್ಲಿ ತಮ್ಮ ಪ್ರಯಾಣವನ್ನು ಲಖನೌನತ್ತ ಮುಂದುವರೆಸಿದ್ದಾರೆ. ಅಪಘಾತದ ಬಳಿಕ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಚಿವೆ ಮೌರ್ಯ ಅವರು “ಪರಮಪಿತ ಪರಮೇಶ್ವರನ ಅನಂತ ಕೃಪೆಯಿಂದ ಹಾಗೂ ನಿಮ್ಮೆಲ್ಲಾ ಪ್ರೀತಿ-ಹಾರೈಕೆಯಿಂದ ನಾನು ಸುರಕ್ಷಿತವಾಗಿದ್ದೇನೆ” ಎಂದು ಪೋಸ್ಟ್ ಮಾಡಿದ್ದಾರೆ. ಅಪಘಾತದ ವೇಳೆ ಎಕ್ಸ್‌ಪ್ರೆಸ್‌ವೇನಲ್ಲಿ ಏಕಮುಖ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿ ಟ್ರಾಫಿಕ್ ನಿಯಂತ್ರಿಸಲಾಗುತ್ತಿತ್ತು. ಸಚಿವರ ಕಾರು ಅಪಘಾತವಾದ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ಅಪಘಾತಪಡಿಸಿದ ಟ್ರಕ್ ಅನ್ನು ವಶಕ್ಕೆ ಪಡೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!