ಉದಯವಾಹಿನಿ, ದುಬೈ: ಚಿನ್ನಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಘನತೆಯ ಸಂಕೇತ ಎಂದೇ ಬಿಂಬಿತವಾಗಿರುವ ಚಿನ್ನವು ಕಷ್ಟ ಕಾಲದಲ್ಲಿಯೂ ನೆರವಾಗುತ್ತದೆ ಎಂದು ಸಾಕಷ್ಟು ಜನರು ಖರೀದಿಸುತ್ತಾರೆ. ಕಳೆದ ಕೆಲ ವರ್ಷಗಳಿಂದ ಚಿನ್ನದ ಬೆಲೆ ಗಗನಕ್ಕೇರಿದ್ದು, ಅಕ್ಟೋಬರ್ 2025ರಲ್ಲಿ 10 ಗ್ರಾಂ ಚಿನ್ನದ ಬೆಲೆ ₹1,33,780ಕ್ಕೆ ತಲುಪಿ ಹೊಸ ದಾಖಲೆ ಬರೆದಿದೆ.
ಭಾರತ(India)ಕ್ಕೆ ಹೋಲಿಸಿದರೆ ಜನರು ದುಬೈನಲ್ಲಿ ಚಿನ್ನ ಖರೀದಿಸಲು ಹೆಚ್ಚು ಆದ್ಯತೆ ಕೊಡುತ್ತಾರೆ. ಕಾರಣ ಈ ದೇಶದಲ್ಲಿ ಚಿನ್ನದ ಮೇಲಿರುವ ಸುಂಕ ವಿನಾಯಿತಿ. ನೀವೂ ದುಬೈನಿಂದ ಚಿನ್ನ ಖರೀದಿಸಿ ಭಾರತಕ್ಕೆ ತರಬೇಕೆಂದುಕೊಂಡಿದ್ದರೆ ಈ ವಿಷಯಗಳನ್ನು ಖಂಡಿತ ತಿಳಿದುಕೊಳ್ಳಿ.
ದುಬೈಯಿಂದ ಭಾರತಕ್ಕೆ ಹಿಂದಿರುಗುವ ಭಾರತೀಯ ಪ್ರಯಾಣಿಕರು ಕಸ್ಟಮ್ಸ್ ಶುಲ್ಕ ಇಲ್ಲದೇ ಚಿನ್ನವನ್ನು ತರಬಹುದು. ಆದರೆ, ಅದು ಸರ್ಕಾರ ನಿಗದಿಪಡಿಸಿರುವ ನಿರ್ದಿಷ್ಟ ಮಿತಿಯೊಳಗಿರಬೇಕು.
ಪುರುಷ ಪ್ರಯಾಣಿಕರಿಗೆ, ₹50,000 ಮೌಲ್ಯ ಮೀರದ ಅಥವಾ 20 ಗ್ರಾಂವರೆಗೆ ಚಿನ್ನಾಭರಣ ಖರೀದಿಗೆ ಯಾವುದೇ ಸುಂಕ ಇಲ್ಲ.
ಮಹಿಳಾ ಪ್ರಯಾಣಿಕರಿಗೆ ಖರೀದಿ ಪ್ರಮಾಣ ಹೆಚ್ಚಾಗಿದ್ದು, 40 ಗ್ರಾಂ ಅಥವಾ ಗರಿಷ್ಠ ₹1,00,000 ಮೌಲ್ಯದ ಚಿನ್ನಾಭರಣ ಸುಂಕವಿಲ್ಲದೇ ಖರೀದಿಸಬಹುದು.
ಈ ವಿನಾಯಿತಿಗಳು ಕೇವಲ ಚಿನ್ನಾಭರಣಗಳಿಗೆ ಮಾತ್ರ; ಚಿನ್ನದ ನಾಣ್ಯಗಳು, ಬಾರ್‌ಗಳು ಅಥವಾ ಬಿಸ್ಕತ್ತುಗಳಿಗೆ ಅನ್ವಯಿಸುವುದಿಲ್ಲ.
