ಉದಯವಾಹಿನಿ, ದಕ್ಷಿಣ ಕೊರಿಯಾ: ಡೇಟಿಂಗ್ ಮಾಡಲು, ಮದುವೆಯಾಗಲು ಹಾಗೂ ಮಕ್ಕಳನ್ನು ಹೊಂದಲು ಸರ್ಕಾರವೇ ಹಣ ನೀಡುತ್ತೆ ಎಂದರೆ ನಂಬಲು ಕಷ್ಟವಾಗಬಹುದು. ಆದರೆ ಕಡಿಮೆ ಜನನ ಪ್ರಮಾಣದ ಸಮಸ್ಯೆ ಎದುರಿಸುತ್ತಿರುವ ದಕ್ಷಿಣ ಕೊರಿಯಾ ಇದಕ್ಕಾಗಿ ವಿಶೇಷ ಆರ್ಥಿಕ ಪ್ರೋತ್ಸಾಹ ಯೋಜನೆಗಳನ್ನು ಜಾರಿಗೆ ತಂದಿದೆ. ದಕ್ಷಿಣ ಕೊರಿಯಾ ಪ್ರಸ್ತುತ ಗಂಭೀರ ಜನಸಂಖ್ಯಾ ಸಂಕಷ್ಟವನ್ನು ಎದುರಿಸುತ್ತಿದೆ.
ದೇಶದ ಜನನ ಪ್ರಮಾಣವು ವಿಶ್ವದಲ್ಲೇ ಅತಿ ಕಡಿಮೆ ಮಟ್ಟಕ್ಕೆ ಇಳಿದಿದ್ದು, ಇದರಿಂದ ಭವಿಷ್ಯದ ಆರ್ಥಿಕತೆ ಮತ್ತು ಸಾಮಾಜಿಕ ಭದ್ರತೆ ಮೇಲೆ ಭಾರಿ ಪರಿಣಾಮ ಬೀರುವ ಆತಂಕ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಯುವಜನರನ್ನು ಸಂಬಂಧಗಳು, ಮದುವೆ ಮತ್ತು ಕುಟುಂಬ ಜೀವನದತ್ತ ಪ್ರೋತ್ಸಾಹಿಸಲು ಸರ್ಕಾರ ಹೊಸ ಹೆಜ್ಜೆ ಇಟ್ಟಿದೆ. ಅತಿಯಾದ ಕೆಲಸದ ಒತ್ತಡ, ದೀರ್ಘ ಕೆಲಸದ ಸಮಯ ಮತ್ತು ಆರ್ಥಿಕ ಒತ್ತಡಗಳಿಂದಾಗಿ ಯುವಜನರು ಡೇಟಿಂಗ್ ಮತ್ತು ಮದುವೆಯಿಂದ ದೂರ ಉಳಿಯುತ್ತಿದ್ದಾರೆ ಎಂದು ಅಧ್ಯಯನಗಳು ಸೂಚಿಸುತ್ತವೆ. ಇದರಿಂದ ವೈಯಕ್ತಿಕ ಜೀವನಕ್ಕೂ ಸಮಯ ಕೊಡಲು ಸಾಧ್ಯವಾಗುತ್ತಿಲ್ಲ. ಈ ಸ್ಥಿತಿಯನ್ನು ಬದಲಿಸಲು ಸರ್ಕಾರ ನೇರ ಆರ್ಥಿಕ ನೆರವು ನೀಡಲು ಮುಂದಾಗಿದೆ.
ಈ ಯೋಜನೆಯಡಿಯಲ್ಲಿ ಡೇಟಿಂಗ್ ಮಾಡಲು ಮುಂದಾಗುವ ದಂಪತಿಗಳಿಗೆ ಸರ್ಕಾರದಿಂದ ನೇರ ಹಣಕಾಸಿನ ಸಹಾಯ ನೀಡಲಾಗುತ್ತದೆ. ಒಟ್ಟಿಗೆ ಸಮಯ ಕಳೆಯಲು, ಪ್ರಯಾಣಕ್ಕೆ ಹೋಗಲು, ಹೋಟೆಲ್‌ನಲ್ಲಿ ಉಳಿಯಲು ಅಥವಾ ಮನರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸಲು ಈ ಹಣವನ್ನು ಬಳಸಿಕೊಳ್ಳಬಹುದು ಎಂಬುದು ಸರ್ಕಾರದ ಉದ್ದೇಶ. ವರದಿಗಳ ಪ್ರಕಾರ, ಡೇಟಿಂಗ್‌ಗೆ ಸರ್ಕಾರವು ಸುಮಾರು ರೂ.31,000 ಮೊತ್ತದ ಆರ್ಥಿಕ ನೆರವನ್ನು ನೀಡುತ್ತಿದೆ. ಇದಲ್ಲದೆ, ಡೇಟಿಂಗ್ ನಂತರ ದಂಪತಿಗಳು ಮದುವೆಯಾದರೆ, ಅವರಿಗೆ ರೂ.25 ಲಕ್ಷವರೆಗೆ ಸಹಾಯಧನ ನೀಡುವ ವ್ಯವಸ್ಥೆಯೂ ಇದೆ. ದಕ್ಷಿಣ ಕೊರಿಯಾದ ಈ ವ್ಯವಸ್ಥೆ ಭಾರತದಲ್ಲಿನ ಸಾಮೂಹಿಕ ವಿವಾಹ ಯೋಜನೆಗಳಿಂದ ಭಿನ್ನವಾಗಿದೆ. ಇಲ್ಲಿ ಗೃಹೋಪಯೋಗಿ ವಸ್ತುಗಳಿಗಿಂತಲೂ ನೇರ ಹಣಕಾಸಿನ ನೆರವಿನ ಮೇಲೆಯೇ ಸರ್ಕಾರ ಹೆಚ್ಚು ಒತ್ತು ನೀಡುತ್ತಿದೆ. ಹಣದ ಕೊರತೆಯೇ ಯುವಜನರು ಮದುವೆ ಮತ್ತು ಕುಟುಂಬ ಜೀವನದಿಂದ ದೂರ ಉಳಿಯಲು ಪ್ರಮುಖ ಕಾರಣ ಎಂಬುದು ಸರ್ಕಾರದ ಅಭಿಪ್ರಾಯ.
