ಉದಯವಾಹಿನಿ, ಇನ್ನೇನು ಕೆಲವೇ ತಿಂಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭವಾಗಲಿದ್ದು ಹತ್ತು ಫ್ರಾಂಚೈಸಿಗಳು ಈಗಾಗಲೇ ಬಲಿಷ್ಠ ಟೀಮ್‌ ಅನ್ನು ಕಟ್ಟಿಕೊಂಡಿವೆ. ಹಾಲಿ ಚಾಂಪಿಯನ್‌ ಆರ್‌ಸಿಬಿ ತಂಡ ಕೂಡ ಈ ಬಾರಿ ಮತ್ತಷ್ಟು ಬಲಶಾಲಿಯಾಗಿದೆ. ಇದರ ಬೆನ್ನಲ್ಲೇ ಈ ಸಲದ ಐಪಿಎಲ್‌ನಲ್ಲಿ ಬಾಂಗ್ಲಾದೇಶದ ಆಟಗಾರರಿಗೆ ಅವಕಾಶ ನೀಡಬಾರದು ಎಂದು ಪ್ರಧಾನಿ ಮೋದಿ ಅವರಿಗೆ ಮಾಜಿ ಸಚಿವ ಎಂ.ಪಿ ಅಪ್ಪಚ್ಚು ರಂಜನ್ ಪತ್ರ ಬರೆದಿದ್ದಾರೆ. ಬಾಂಗ್ಲಾದೇಶದಲ್ಲಿ ಮೊನ್ನೆ ಮೊನ್ನೆ ಹಿಂದೂ ಯುವಕನಿಗೆ ಮನಬಂದಂತೆ ಹೊಡೆದು ಜೀವ ತೆಗೆಯಲಾಗಿತ್ತು. ಬಳಿಕ ಮೃತದೇಹವನ್ನು ಮರಕ್ಕೆ ಕಟ್ಟಿ ಸುಡಲಾಗಿತ್ತು. ಇಂತಹ ಹೀನ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇನೆ. ಈ ಹಿಂದೆ 1971ರಲ್ಲಿ ಬಾಂಗ್ಲಾದೇಶವನ್ನು ಘೋಷಣೆ ಮಾಡಲಾಯಿತು. ಇದಕ್ಕಾಗಿ ಸುಮಾರು 500 ಕೋಟಿ ರೂಪಾಯಿಗಳಷ್ಟು ಆಗ ನಮ್ಮ ದೇಶ ಖರ್ಚು ಮಾಡಿದೆ. ಆಗ ಎರಡು ಸಾವಿರ ಸೈನಿಕರನ್ನ ಕಳೆದುಕೊಳ್ಳಲಾಯಿತು ಎಂದು ಮಾಜಿ ಸಚಿವ ಹೇಳಿದ್ದಾರೆ.

ಬಾಂಗ್ಲಾದೇಶದಲ್ಲಿ ಕ್ರೂರವಾಗಿ ಹಿಂದೂ ಯುವಕ ದೀಪು ಚಂದ್ರ ದಾಸ್‌ ಅವರ ಜೀವ ತೆಗೆಯಲಾಗಿದೆ. ಇಂತಹ ಹೀನ ಮನಸ್ಥಿತಿಯನ್ನು ಇಡೀ ಪ್ರಪಂಚವೇ ಖಂಡಿಸುವಂತದ್ದು. ಇಂತಹ ಘಟನೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಮನವಿ ಮಾಡಲಾಗುತ್ತಿದೆ. ಇನ್ನೊಂದು ಬಾರಿ ಬಾಂಗ್ಲಾದೇಶಕ್ಕೆ ಮುಕ್ತಿಯನ್ನು ಕೊಡಿ. ನಮ್ಮ ದೇಶದ ನಿಯಂತ್ರಣದಲ್ಲೇ ಇರುವಂತೆ ನಾವು ಮಾಡಬೇಕು. ಅಲ್ಲದೇ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಬಾಂಗ್ಲಾದೇಶದ ಆಟಗಾರರನ್ನು ಸೇರಿಸಲೇಬಾರದು ಎಂದು ಬಿಸಿಸಿಐ ಹಾಗೂ ಪ್ರಧಾನಿ ಮೋದಿ ಅವರ ಬಳಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಎಂ.ಪಿ ಅಪ್ಪಚ್ಚು ರಂಜನ್ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!