ಉದಯವಾಹಿನಿ, ನವದೆಹಲಿ: ಕೆಲವು ಆಹಾರಗಳು ಅನಾರೋಗ್ಯಕರ ಎಂಬುದು ತಿಳಿದಿರುತ್ತದೆ. ಆದರೆ ಅವುಗಳನ್ನು ಬಿಟ್ಟು ಆರೋಗ್ಯಕರ ಆಯ್ಕೆಗಳತ್ತ ಹೊರಳುವಾಗ ಯಾವುದು ತಿನ್ನಬೇಕು ಎಂಬುದೇ ಬಗೆಹರಿ ಯುವುದಿಲ್ಲ. ಉದಾ, ಬೆಳಗಿನ ತಿಂಡಿಗೆ ಪ್ಯಾಕ್‌ನಿಂದ ಸೀರಿಯಲ್ ಸುರಿದು ಅದಕ್ಕೆ ಹಾಲೆರೆದು ಕೊಂಡು ತಿನ್ನುವುದು ಆರೋಗ್ಯಕ್ಕೆ ಸರಿಯಲ್ಲ ಎಂಬುದು ತಿಳಿದಿರುತ್ತದೆ. ಅದರ ಬದಲಿಗೆ ಅದೇ ಅವಲಕ್ಕಿ, ಉಪ್ಪಿಟ್ಟುಗಳು ಬೋರಾಗಿರುತ್ತವೆ. ದೋಸೆ, ಇಡ್ಲಿಗಳು ಧಿಡೀರ್ ಆಗುವಂಥವಲ್ಲ. ಚಪಾತಿ, ರೊಟ್ಟಿಗೆ ಸಮಯ ಬೇಕು… ಹೀಗೆ ಒಂದೊಂದೇ ನೆವಗಳನ್ನು ಕೊಡುತ್ತಾ ಹೋಗುತ್ತೇವೆ. ಹೀಗಿರು ವಾದ ಈ ಚಳಿಗಾಲದಲ್ಲಿ ಸಜ್ಜೆಯನ್ನೇಕೆ (pearl millet) ಪ್ರಯತ್ನಿಸಬಾರದು.
ಪ್ರೊಟೀನ್‌ಗಳ ಗುಡಾಣ, ನಾರಿನ ದಾಸ್ತಾನು, ಸೂಕ್ಷ್ಮ ಪೋಷ ಕಾಂಶಗಳ ಕೋಶ ಮುಂತಾದ ಹಲವು ಬಗೆಯ ಗುಣವಾಚಕಗ ಳನ್ನು ಹೊತ್ತಿರುವ ಸಿರಿಧಾನ್ಯಗಳು ದೀರ್ಘಕಾಲದಿಂದಲೇ ನಮ್ಮಲ್ಲಿ ಬಳಕೆ ಯಲ್ಲಿದ್ದವು. ಕ್ರಮೇಣ ಅಕ್ಕಿ, ಗೋದಿ ಮತ್ತಿತರ ಬೆಳೆಗಳ ಭರಾಟೆಯಲ್ಲಿ ಹಿನ್ನೆಲೆಗೆ ಸರಿದಿದ್ದವು. ಆದರೀಗ ಅವುಗಳನ್ನು ಅರಿತು ಬಳಸುವ ಕಾಲ ಮತ್ತೆ ಬಂದಿದೆ. ಹೀಗಿರುವಾಗ, ಬಾಜ್ರಾ ಎಂದೂ ಕರೆಯಲಾಗುವ ಸಜ್ಜೆಯ ಸದ್ಗುಣಗಳ ಬಗ್ಗೆ, ಚಳಿಗಾಲದಲ್ಲಿ ಅವುಗಳ ಉಪಯೋಗಗಳ ಬಗ್ಗೆ ಇಲ್ಲಿದೆ ಮಾಹಿತಿ
ಕಡಿಮೆ ನೀರಿನಲ್ಲಿ ಬೆಳೆಯುವ, ಅತ್ಯಧಿಕ ಪೋಷಕಾಂಶಗಳನ್ನು ನೀಡುವ, ದೇಹವನ್ನು ರೋಗ ಗಳಿಂದ ದೂರ ಮಾಡುವ ಅದ್ಭುತ ಸಾಮರ್ಥ್ಯ ಸಿರಿ ಧಾನ್ಯಗಳದ್ದು. ಸಜ್ಜೆಯೂ ಈ ಪಟ್ಟಿಯಲ್ಲಿದೆ. ಹಿಂದೆಲ್ಲಾ ಬಡವರ ಆಹಾರವೆಂದೇ ಕರೆಯಲಾಗುತ್ತಿದ್ದ ಇವು ಈಗ ದುಬಾರಿಯೆನಿಸಿವೆ. ಕರ್ನಾಟಕ ದಲ್ಲಿ ರಾಗಿ ಜನಪ್ರಿಯವಿರುವಂತೆ, ಗುಜರಾತ್, ರಾಜಸ್ಥಾನಗಳಲ್ಲಿ ಬಾಜ್ರಾ ಪ್ರಚಲಿತವಿರುವ ಆಹಾರ. ಗೋದಿಯ ಅಲರ್ಜಿ ಇರುವವರಿಗೆ, ಮಲಬದ್ಧತೆಯಿಂದ ನರಳುತ್ತಿರುವವರಿಗೆ, ಚಯಾಪಚಯದ ಸಮಸ್ಯೆ ಇರುವವರಿಗೆ ಸಜ್ಜೆಯಂಥ ಕಿರು ಧಾನ್ಯಗಳು ಉತ್ತಮ ಪರಿಹಾರ ನೀಡಬಲ್ಲವು.
ಚಳಿಗಾಲದಲ್ಲಿ ಇದರ ಬಳಕೆ: ಚಳಿಗಾಲದಲ್ಲಿ ಸೋಂಕುಗಳ ಕಾಟ ಹೆಚ್ಚು. ಇದಕ್ಕೆ ಪ್ರತಿಯಾಗಿ ದೇಹಕ್ಕೆ ಭರಪೂರ ಪೋಷ ಕಾಂಶಗಳನ್ನು ಒದಗಿಸಿ, ವೈರಸ್ ಮತ್ತು ಬ್ಯಾಕ್ಟೀರಿಯಾ ಗಳೊಂದಿಗೆ ಹೋರಾಡುವ ಪ್ರತಿರೋಧಕ ಶಕ್ತಿಯನ್ನು ವೃದ್ಧಿಸಬೇಕಾಗುತ್ತದೆ. ಪ್ರೊಟೀನ್, ನಾರು, ಸಂಕೀರ್ಣ ಪಿಷ್ಟಗಳ ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಬ್ಬಿಣ, ಫಾಸ್ಫರಸ್, ಪೊಟಾಶಿಯಂ, ಮೆಗ್ನೀಶಿಯಂನಂಥ ಸತ್ವಗಳು ಸಜ್ಜೆಯಲ್ಲಿ ಹೇರಳವಾಗಿವೆ. ಇವುಗಳಿಂದ ದೇಹದ ಸ್ವಾಸ್ಥ್ಯವನ್ನು ಸುಲಭವಾಗಿ ವೃದ್ಧಿಸಬಹುದು. ಆದರೆ ಇದರ ಬಳಕೆ ಹೇಗೆ ಎನ್ನುವುದು ಹಲವರ ಪ್ರಶ್ನೆ.
