ಉದಯವಾಹಿನಿ , ಮುಂಬೈ: ಪತ್ನಿ ಜೊತೆ ಜಗಳ ಮಾಡಿಕೊಂಡು ವ್ಯಕ್ತಿಯೊಬ್ಬ ತನ್ನ ಅವಳಿ ಮಕ್ಕಳ ಕತ್ತು ಸೀಳಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ವಾಶಿಮ್‌ ಜಿಲ್ಲೆಯ ನಿವಾಸಿ ರಾಹುಲ್‌ ಚವಾಣ್‌ ಕೊಲೆ ಆರೋಪಿ. ಚವಾಣ್ ತನ್ನ ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದಾಗ ದಂಪತಿ ನಡುವೆ ತೀವ್ರ ವಾಗ್ವಾದ ನಡೆದಿದೆ. ಜಗಳದ ಬಳಿಕ ಆತನ ಪತ್ನಿ ತನ್ನ ಹೆತ್ತವರ ಮನೆಗೆ ಹೋಗಿದ್ದಾರೆ. ಆದರೆ, ಚವಾಣ್ ತನ್ನ ಹೆಣ್ಣುಮಕ್ಕಳೊಂದಿಗೆ ಏಕಾಂಗಿಯಾಗಿ ಪ್ರಯಾಣ ಮುಂದುವರಿಸಿದ್ದಾನೆ. ನಂತರ ಮಕ್ಕಳನ್ನು ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ಮಕ್ಕಳ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ. ಕೊನೆಗೆ ಪೊಲೀಸ್‌ ಠಾಣೆಗೆ ಹೋಗಿ ಶರಣಾಗಿದ್ದಾನೆ.
ಕೋಪದಿಂದ ಚವಾಣ್ ಅವಳಿ ಮಕ್ಕಳನ್ನು ಬುಲ್ಧಾನಾ ಜಿಲ್ಲೆಯ ಅಂಚಾರ್ವಾಡಿಯಲ್ಲಿರುವ ಅರಣ್ಯ ಪ್ರದೇಶಕ್ಕೆ ಕರೆದೊಯ್ದು, ಅಲ್ಲಿ ಅವರ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ಮಕ್ಕಳ ಶವಗಳನ್ನು ವಶಪಡಿಸಿಕೊಂಡಿದೆ. ಪ್ರಾಥಮಿಕ ತನಿಖೆಯಲ್ಲಿ ಶವಗಳು ಭಾಗಶಃ ಸುಟ್ಟುಹೋಗಿವೆ ಎಂದು ತಿಳಿದುಬಂದಿದೆ. ಕೊಲೆ ನಂತರ ಚವಾಣ್ ಬೆಂಕಿ ಹಚ್ಚುವ ಮೂಲಕ ಸಾಕ್ಷ್ಯಗಳನ್ನು ನಾಶಮಾಡಲು ಪ್ರಯತ್ನಿಸಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ಆದಾಗ್ಯೂ, ಪೊಲೀಸ್ ಅಧಿಕಾರಿಗಳು ತನಿಖೆಯ ಈ ಅಂಶವನ್ನು ಇನ್ನೂ ದೃಢಪಡಿಸಿಲ್ಲ. ಮಕ್ಕಳನ್ನು ಕೊಂದ ಬಳಿಕ ಸುಟ್ಟು ಹಾಕಲಾಗಿದೆಯೇ ಎಂಬುದು ವಿಧಿವಿಜ್ಞಾನ ಪರೀಕ್ಷೆ ಮತ್ತು ಮರಣೋತ್ತರ ಪರೀಕ್ಷೆ ನಂತರ ತಿಳಿಯಲಿದೆ. ಆರಂಭಿಕ ವಿಚಾರಣೆಯ ಭಾಗವಾಗಿ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್ಪಿ) ಮನೀಷಾ ಕದಮ್ ಮತ್ತು ಇತರರು ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!