ಉದಯವಾಹಿನಿ , ಪಟನಾ: ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಬೆಂಗಾವಲು ಪಡೆಯ ವಾಹನಗಳನ್ನು ಕಾರು ಸರ್ವಿಸ್ ಸೆಂಟರ್‌ನಲ್ಲಿ ತೊಳೆಯುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಬಿಹಾರದ ಸಮಸ್ತಿಪುರದಲ್ಲಿ ಈ ಘಟನೆ ನಡೆದಿದೆ. ಇದೇನಾ ಹೈ ಸೆಕ್ಯೂರಿಟಿ ಎಂದು ಕೆಲವರು ಪ್ರತಿಕ್ರಿಯಿಸಿದ್ದರೆ, ಇನ್ನೂ ಕೆಲವರು ಕಾರು ವಾಶ್ ಮಾಲೀಕರಿಗೆ ಕೆಲಸ ಸಿಕ್ಕಿತು ಎಂದು ಸಮರ್ಥಿಸಿಕೊಂಡಿದ್ದಾರೆ.
ಸ್ವತಃ ಈ ವಿಡಿಯೊವನ್ನು ಕಾರು ವಾಶ್ ಮಾಲೀಕರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದು ಪ್ರಧಾನಿಯ ಬೆಂಗಾವಲು ಪಡೆಯ ವಾಹನವಲ್ಲ. ಬದಲಾಗಿ ಪ್ರಧಾನಿ ಪ್ರಯಾಣಿಸುವ ಕಾರು. ಭದ್ರತಾ ದೃಷ್ಟಿಯಿಂದ ಪ್ರಧಾನಿಗೆ ಬೇರೆಯದ್ದೇ ವಾಷಿಂಗ್ ಹಾಗೂ ಸರ್ವಿಸಿಂಗ್ ಇರಬೇಕು ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವರ್ಷದ ಜುಲೈನಲ್ಲಿ ಮೋದಿ ಹಂಚಿಕೊಂಡ ಫೋಟೋದಲ್ಲಿ ಅದೇ ಎಸ್‍ಯುವಿನಲ್ಲಿ ಕುಳಿತಿರುವುದು ಕಂಡುಬಂದಿತ್ತು ಎಂದು ಮತ್ತೊಬ್ಬ ಬಳಕೆದಾರರು ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳು ಹೇಳುವಂತೆ, ಸಾಕಷ್ಟು ಜನರು ಇದನ್ನು ಕುತೂಹಲದಿಂದ ವೀಕ್ಷಿಸಿದರು. ಕೆಲವರು ಸೆಲ್ಫಿ ಫೋಟೋ ಕ್ಲಿಕ್ಕಿಸಿದ್ದಾರೆ. ಕಾರ್ ವಾಶ್ ಸಿಬ್ಬಂದಿಯು ಪ್ರಧಾನಿ ಅವರ ಕಾರು ತೊಳೆಯುವುದಕ್ಕೆ ಹರ್ಷ ವ್ಯಕ್ತಪಡಿಸಿದರು ಎಂದು ಹೇಳಿದರು. ಸದ್ಯ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾದ ವಿಡಿಯೊದಲ್ಲಿ, ಪ್ರಧಾನಿಯವರ ಕಾರು ತೊಳೆಯುತ್ತಿರುವುದನ್ನು ತೋರಿಸಲಾಗಿದೆ. ಈ ವಿಡಿಯೊವನ್ನು ಕಾರ್ ವಾಶ್ ಮಾಲೀಕರು ಚಿತ್ರೀಕರಿಸಿದ್ದಾರೆ. ಈ ಘಟನೆಯು ಭದ್ರತಾ ಪ್ರೋಟೋಕಾಲ್‌ಗಳ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ನಾಂದಿ ಹಾಡಿದೆ. ಏಕೆಂದರೆ ಪ್ರಧಾನಿ ಮೋದಿ ಬೇರೆ ವಾಹನದಲ್ಲಿ ಅಲ್ಲಿಂದ ತೆರಳಿದ ನಂತರ ಈ ಘಟನೆ ಸಂಭವಿಸಿದೆ.

Leave a Reply

Your email address will not be published. Required fields are marked *

error: Content is protected !!