ಉದಯವಾಹಿನಿ , ವಾಷಿಂಗ್ಟನ್ : ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಡಾಲರ್ ಬಹುಕಾಲದಿಂದ ಕಿಂಗ್. ಆದರೆ ನಿಧಾನವಾಗಿ ಡಾಲರ್ ಮೇಲಿನ ವಿಶ್ವಾಸ ಕಡಿಮೆಯಾಗುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಂಕ ಸಮರದ ಪರಿಣಾಮ ಮತ್ತೆ ಚರ್ಚೆ ನಡೆಯುತ್ತಿದೆ. ಚೀನಾ ತನ್ನ ಕರೆನ್ಸಿಯಾದ ಯುವಾನ್ ಅನ್ನು ಮುನ್ನೆಲೆಗೆ ತರುತ್ತಿದೆ. ಇದರ ಉದ್ದೇಶ ಡಾಲರ್ ಪ್ರಾಬಲ್ಯವನ್ನು ಹತ್ತಿಕ್ಕುವುದು. ಇದು ಹೇಗೆ ಸಾಧ್ಯ? ಬಹುತೇಕ ರಾಷ್ಟ್ರಗಳು ಅಂತಾರಾಷ್ಟ್ರೀಯ ವ್ಯಾಪಾರಗಳಲ್ಲಿ ಡಾಲರ್ ಬಳಸುತ್ತವೆ. ಆದರೆ ಚೀನಾ ಇದೀಗ ನಾನಾ ದೇಶಗಳ ಜತೆಗೆ ಕರೆನ್ಸಿ ವಿನಿಮಯ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದೆ. ಇದರ ಉದ್ದೇಶ ಅಂತಾರಾಷ್ಟ್ರೀಯ ಹಣಕಾಸು ವರ್ಗಾವಣೆಗಳಲ್ಲಿ ಡಾಲರ್ ಅನ್ನು ಕೈ ಬಿಡುವುದು.
ಹಲವು ದೇಶಗಳ ಜತೆಗೆ ಚೀನಾ ಈಗಾಗಲೇ ಯುವಾನ್ ಅನ್ನು ಬಳಸುತ್ತಿದೆ. ಜಪಾನ್ ಮತ್ತು ದಕ್ಷಿಣ ಕೊರಿಯಾ ಜತೆಗೆ ಕೂಡ ಈ ಬಗ್ಗೆ ಮಾತುಕತೆ ನಡೆಸುತ್ತಿದೆ. ಪ್ರಾದೇಶಿಕ ವ್ಯಾಪಾರಗಳಲ್ಲಿ ಯುವಾನ್ ಕರೆನ್ಸಿಯನ್ನು ಪ್ರಮೋಟ್ ಮಾಡುವುದು ಮತ್ತೊಂದು ಉದ್ದೇಶ. ಈ ಕರೆನ್ಸಿ ಸ್ವಾಪ್‌ನಲ್ಲಿ ಸೆಂಟ್ರಲ್ ಬ್ಯಾಂಕ್‌ಗಳು ಪರಸ್ಪರ ಅವರವರ ದೇಶಗಳ ಕರೆನ್ಸಿಯಲ್ಲಿ ಹಣಕಾಸು ವರ್ಗಾವಣೆಗಳನ್ನು ನಡೆಸುತ್ತವೆ. ಡಾಲರ್ ಅನ್ನು ಬಳಸುವುದಿಲ್ಲ.
ಟ್ರಂಪ್ ಸುಂಕ ಸಮರದ ಪರಿಣಾಮ ಡಾಲರ್ ನಿಧಾನವಾಗಿ ವಿಶ್ವಾಸ ಕಳೆದುಕೊಳ್ಳುತ್ತಿದೆ. ಇದರ ಪ್ರಯೋಜನ ಪಡೆಯಲು ಚೀನಾ ಕಾಯುತ್ತಿದೆ. ಇಥಿಯೋಪಿಯಾ, ಕೀನ್ಯಾ, ಶ್ರೀಲಂಕಾ ಮುಂತಾದ ಸಣ್ಣ ಪುಟ್ಟ ರಾಷ್ಟ್ರಗಳು ಡಾಲರ್‌ನಲ್ಲಿ ಪಡೆದಿರುವ ಸಾಲವನ್ನು ಯುವಾನ್ ಕರೆನ್ಸಿಗೆ ಬದಲಿಸಲು ಚೀನಾ ಡೀಲ್ ಮಾಡಿದೆ. ಇದರಿಂದ ಈ ರಾಷ್ಟ್ರಗಳಿಗೆ ಸಾಲದ ಬಡ್ಡಿ ದರ ಕಡಿಮೆಯಾಗಲಿದೆ. ಚೀನಾಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುವಾನ್ ಕರೆನ್ಸಿಯ ಬಳಕೆ ಹೆಚ್ಚಿಸಲು, ಡಾಲರ್ ಪ್ರಾಬಲ್ಯ ತಗ್ಗಿಸಲು ಅವಕಾಶ ಸೃಷ್ಟಿಯಾಗಲಿದೆ.
