ಉದಯವಾಹಿನಿ, ನವಿ ಮುಂಬೈ: ಭಾನುವಾರದ ಬಾಂಗ್ಲಾದೇಶ ವಿರುದ್ಧದ ಮಹಿಳಾ ಏಕದಿನ ವಿಶ್ವಕಪ್‌ನ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಮೂರು ಬದಲಾವಣೆಯೊಂದಿಗೆ ಆಡಲಿಳಿಯಿತು. ರಿಚಾ ಘೋಷ್, ಕ್ರಾಂತಿ ಗೌಡ್ ಮತ್ತು ಸ್ನೇಹ್ ರಾಣಾ ಬದಲಿಗೆ ಉಮಾ ಚೆಟ್ರಿ, ರಾಧಾ ಯಾದವ್ ಮತ್ತು ಅಮನ್‌ಜೋತ್ ಕೌರ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿತು. ವಿಕೆಟ್ ಕೀಪರ್ ಬ್ಯಾಟರ್ ಉಮಾ ಚೆಟ್ರಿ ಭಾರತ ಪರ ಪದಾರ್ಪಣೆ ಮಾಡಿದರು.
ಉಪನಾಯಕಿ ಸ್ಮೃತಿ ಮಂಧನಾ ಅವರು ಕ್ಯಾಪ್ ನೀಡಿ ತಂಡಕ್ಕೆ ಸ್ವಾಗತಿಸಿದರು. 2013-14ರಲ್ಲಿ ಭಾರತಕ್ಕಾಗಿ ಮೂರು ಏಕದಿನ ಮತ್ತು ಟಿ20 ಪಂದ್ಯಗಳನ್ನು ಆಡಿದ ರಿತು ಧ್ರುವ್ ನಂತರ, ಚೆಟ್ರಿ ಭಾರತದ ಪರ ಏಕದಿನ ಪಂದ್ಯವಾಡಿದ ಅಸ್ಸಾಂನ ಎರಡನೇ ಮಹಿಳಾ ಕ್ರಿಕೆಟಿಗರಾದರು.
ಅಸ್ಸಾಂ ತಂಡವನ್ನು ಪ್ರತಿನಿಧಿಸುತ್ತಿರುವ ಉಮಾ ಚೆಟ್ರಿ ಈಗಾಗಲೇ ಏಳು ಮಹಿಳಾ ಟಿ20 ಪಂದ್ಯಗಳಲ್ಲಿ ಭಾರತ ಪರ ಆಡಿದ್ದಾರೆ. ಡಿಸೆಂಬರ್ 2024 ರಲ್ಲಿ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅವರು ಕೊನೆಯ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯವಾಡಿದರು. 23 ವರ್ಷದ ವಿಕೆಟ್ ಕೀಪರ್ ಬ್ಯಾಟರ್ ದೇಶೀಯ ಕ್ರಿಕೆಟ್ ನಲ್ಲಿ ಸ್ಥಿರ ಪ್ರದರ್ಶನ ನೀಡುವ ಮೂಲಕ ವಿಶ್ವಕಪ್‌ಗೆ ಆಯ್ಕೆಯಾಗಿದ್ದರು.
