ಉದಯವಾಹಿನಿ, ನವದೆಹಲಿ: ಐದು ವರ್ಷಗಳ ಬಳಿಕ ಭಾರತ ಮತ್ತು ಚೀನಾ ನಡುವಿನ ನೇರ ವಿಮಾನ ಹಾರಾಟ ಪ್ರಾರಂಭಗೊಳ್ಳಲಿದೆ. ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಸ್ಥಗಿತಗೊಂಡಿದ್ದ ನೇರ ವಿಮಾನ ಹಾರಾಟ ಇದೀಗ ಮತ್ತೆ ಪ್ರಾರಂಭವಾಗಲಿದೆ. ವಿಮಾನ ಹಾರಾಟ ಪ್ರಾರಂಭವು ಎರಡು ದೇಶಗಳ ನಡುವಿನ ಸಕಾರಾತ್ಮಕ ಹೆಜ್ಜೆ ಎಂದು ಈ ಹಿಂದೆ ಚೀನಾ ಹೇಳಿತ್ತು. ಉಭಯ ದೇಶಗಳ ನಡುವಿನ ಮೊದಲ ವಿಮಾನ ಹಾರಾಟ ಭಾರತದಿಂದ ರಾತ್ರಿ 10 ಗಂಟೆಗೆ ಹೊರಡಲಿದೆ.
ಕೋಲ್ಕತ್ತಾ ಮತ್ತು ಗುವಾಂಗ್ಝೌ ನಡುವಿನ ಇಂಡಿಗೋ ವಿಮಾನವು ಅಕ್ಟೋಬರ್ 26ರಂದು ರಾತ್ರಿ ಹಾರಾಟ ನಡೆಸಲಿದೆ. ಶಾಂಘೈನಿಂದ ನವದೆಹಲಿಗೆ ವಿಮಾನಗಳು ನವೆಂಬರ್ 9ರಿಂದ ಆರಂಭಗೊಳ್ಳಲಿದೆ. ಇನ್ನು ದೆಹಲಿಯಿಂದ ಗುವಾಂಗ್ಝೌ ಇಂಡಿಗೋ ವಿಮಾನವು ನವೆಂಬರ್ 10ರಿಂದ ಹಾರಾಟ ಪ್ರಾರಂಭಿಸಲಿದೆ.ಚೀನಾಕ್ಕೆ ನೇರ ವಿಮಾನ ಹಾರಾಟ ಅಕ್ಟೋಬರ್ 26ರಂದು ಪುನರಾರಂಭಗೊಳ್ಳಲಿವೆ ಎಂದು ಗಾಂಧಿ ಜಯಂತಿಯಂದು ಭಾರತ ಘೋಷಣೆ ಮಾಡಿತ್ತು.
ಈ ಬಗ್ಗೆ ಭಾನುವಾರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಭಾರತದಲ್ಲಿನ ಚೀನಾ ರಾಯಭಾರ ಕಚೇರಿಯ ವಕ್ತಾರ ಯು ಜಿಂಗ್, ಚೀನಾ ಮತ್ತು ಭಾರತದ ನಡುವಿನ ನೇರ ವಿಮಾನಗಳು ಕೋಲ್ಕತ್ತಾ ಮತ್ತು ಗುವಾಂಗ್ಝೌ ನಿಂದ ಪ್ರಾರಂಭವಾಗುತ್ತದೆ. ಶಾಂಘೈ ಮತ್ತು ನವದೆಹಲಿ ನವೆಂಬರ್ 9ರಿಂದ ಪ್ರಾರಂಭವಾಗುತ್ತದೆ. ವಾರಕ್ಕೆ 3 ಬಾರಿ ಹಾರಾಟ ನಡೆಸಲಿದೆ ಎಂದು ತಿಳಿಸಿದ್ದಾರೆ.
