ಉದಯವಾಹಿನಿ, ನವೀ ಮುಂಬೈ: ಮಹಿಳಾ ವಿಶ್ವಕಪ್ ಟೂರ್ನಿಯ ಭಾರತ ಹಾಗೂ ಬಾಂಗ್ಲಾದೇಶ ನಡುವಣ ಕೊನೆಯ ಲೀಗ್ ಪಂದ್ಯ ಮಳೆಯಿಂ ಫಲಿತಾಂಶ ಕಾಣದೆ ರದ್ದುಗೊಂಡಿತು. ಈ ಮೊದಲೇ ಸೆಮಿಫೈನಲ್ ಪ್ರವೇಶಿಸಿದ ಕಾರಣ ಭಾರತಕ್ಕೆ ಈ ಪಂದ್ಯ ಅಷ್ಟಾಗಿ ಮಹತ್ವ ಪಡೆದಿರಲಿಲ್ಲ. ಭಾರತ ಅ.30ರಂದು ಆಸ್ಟ್ರೇಲಿಯಾ ವಿರುದ್ಧ ಎರಡನೇ ಸೆಮಿ ಪಂದ್ಯದಲ್ಲಿ ಕಣಕ್ಕಿಳಿಯಲಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ದುಕೊಂಡಿತು. ಆದರೆ ಪಂದ್ಯ ಆರಂಭಕ್ಕೂ ಮುನ್ನವೇ ಮಳೆ ಸುರಿಯಲಾರಂಭಿಸಿತು. ಹಲವು ಗಂಟೆಗಳ ಬಳಿಕ ಓವರ್ ಕಡಿತದೊಂದಿಗೆ ಪಂದ್ಯ ಆರಂಭಿಸಲಾಯಿತು. ಬ್ಯಾಟಿಂಗ್ ಮುಂದುವರಿಸಿದ ಬಾಂಗ್ಲಾ ನಿಗದಿತ 27 ಓವರ್‌ಗಳಲ್ಲಿ 9 ವಿಕೆಟ್‌ಗೆ 119 ರನ್ ಬಾರಿಸಿತು.
ಆದರೆ ಭಾರತ ಗುರಿ ಬೆನ್ನಟ್ಟುವಾಗ ಮತ್ತೆ ಮಳೆ ಅಡ್ಡಿಪಡಿಸಿತು. ಆಗ ಭಾರತ, 8.4 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 57 ರನ್ ಗಳಿಸಿತ್ತು. ಮಳೆ ನಿಲ್ಲುವ ಲಕ್ಷಣ ಕಂಡು ಬಾರದ ಕಾರಣ ಅಂತಿಮವಾಗಿ ಉಭಯ ತಂಡಗಳ ನಾಯಕಿಯರ ಜತೆ ಚರ್ಚಿಸಿ ಅಂಪೈರ್ ಪಂದ್ಯವನ್ನು ರದ್ದು ಎಂದು ಘೋಷಿಸಿದರು.
ಸೆಮಿಗೂ ಮುನ್ನ ಆತಂಕ: ಆಸೀಸ್ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಭಾರತಕ್ಕೆ ದೊಡ್ಡ ಆಘಾತವೊಂದು ಎದುರಾಗಿದೆ. ತಂಡದ ಸ್ಟಾರ್ ಆಟಗಾರ್ತಿ ಪ್ರತಿಕಾ ರಾವಲ್ ಫೀಲ್ಡಿಂಗ್ ವೇಳೆ ಗಾಯಗೊಂಡಿದ್ದಾರೆ. ಗಾಯದ ಕಾರಣ ಬ್ಯಾಟಿಂಗ್ ಕೂಡ ನಡೆಸಲಿಲ್ಲ. ಮಳೆಯಿಂದ ಮೈದಾನ ಒದ್ದೆಯಾಗಿದ್ದ ಕಾರಣ ಜಾರಿ ಬಿದ್ದು ಕಾಲಿಗೆ ಗಾಯ ಮಾಡಿಕೊಂಡರು. ಒಂದೊಮ್ಮೆ ಅವರು ಸೆಮಿ ಪಂದ್ಯಕ್ಕೆ ಅಲಭ್ಯರಾದರೆ ಭಾರತಕ್ಕೆ ದೊಡ್ಡ ಹೊಡೆತ ಬೀಳಲಿದೆ. ಅವರು ಆಡಿದ 6 ಇನಿಂಗ್ಸ್‌ನಿಂದ 308ರನ್ ಬಾರಿಸಿ ದ್ವಿತೀಯ ಅತ್ಯಧಿಕ ಸ್ಕೋರ್ ಎನಿಸಿಕೊಂಡಿದ್ದಾರೆ.
