ಉದಯವಾಹಿನಿ, ನವದೆಹಲಿ: ಭಾರತ ಏಕದಿನ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ ಅವರ ಆರೋಗ್ಯದಲ್ಲಿ ಇಂದು ಅಲ್ಪ ಚೇತರಿಕೆ ಕಂಡು ಬಂದಿದೆ. ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಅಲೆಕ್ಸ್ ಕೇರಿ ಅವರ ಕ್ಯಾಚ್ ಪಡೆಯುವ ವೇಳೆ ಗಂಭೀರ ಗಾಯಕ್ಕೆ ತುತ್ತಾಗಿದ್ದ ಅಯ್ಯರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲದೆ ಅವರ ಪೆಕ್ಕೆಲುಬಿನಲ್ಲಿ ಆಂತರಿಕ ರಕ್ತಸ್ರಾವವಾಗಿದ್ದ ಕಾರಣ ಐಸಿಯುನಲ್ಲಿರಿಸಲಾಗಿತ್ತು. ಆದರೆ ಸ್ವಲ್ಪ ನಿಯಂತ್ರಣ ಕಂಡು ಬಂದ ಹಿನ್ನೆಲೆಯಲ್ಲಿ ಇದೀಗ ಶ್ರೇಯಸ್ ಅಯ್ಯರ್ ಅವರನ್ನು ಐಸಿಯುನಿಂದ ವಾರ್ಡ್ಗೆ ಶಿಫ್ಟ್ ಮಾಡಲಾಗಿದ್ದು, ಸಣ್ಣದೊಂದು ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಗಿದೆ ಎನ್ನಲಾಗಿದೆ.
ಶ್ರೇಯಸ್ ತಂಡದ ಸಹ ಆಟಗಾರರೊಂದಿಗೆ ದೂರವಾಣಿ ಕರೆಯಲ್ಲಿ ಮಾತನಾಡಿದ್ದು, ಮಾನಸಿಕವಾಗಿ ಧೃಡವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಅವರ ಕುಟುಂಬವು ಸಿಡ್ನಿಗೆ ತಲುಪಿದ್ದು, ಸಂಪೂರ್ಣ ಅವರ ಹಾರೈಕೆಯಲ್ಲಿ ತೊಡಗಿದೆ. ಇನ್ನೂ ಬಿಸಿಸಿಐ ತಂಡದ ವೈದ್ಯರು ಶ್ರೇಯಸ್ ಜೊತೆಗಿದ್ದು, ಅವರ ಚಿಕಿತ್ಸೆಯನ್ನು ನೋಡಿಕೊಳ್ಳುತ್ತಿದ್ದಾರೆ. ಬಿಸಿಸಿಐ ಅಯ್ಯರ್ ಅವರ ಆರೋಗ್ಯದ ಸ್ಥಿತಿಗತಿ ಕುರಿತು ಮಾಹಿತಿ ಹಂಚಿಕೊಂಡಿದ್ದು, ಅವರು ಸ್ಥಿರರಾಗಿದ್ದಾರೆ, ಗಾಯದಿಂದ ಚೇತರಿಸಿಕೊಳ್ಳುವಲ್ಲಿ ಪ್ರಗತಿ ಸಾಧಿಸುತ್ತಿದ್ದಾರೆ ಎಂದು ಹೇಳಿದೆ. “ಅಕ್ಟೋಬರ್ 25 ರಂದು ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಗಾಯಕ್ಕೆ ತುತ್ತಾಗಿದ್ದ ಶ್ರೇಯಸ್ ಅಯ್ಯರ್ ಅವರ ಪಕ್ಕೆಲುಬಿನಲ್ಲಿ ಗಾಯವಾಗಿದೆ. ಇದರ ಪರಿಣಾಮವಾಗಿ ಅವರ ಪಕ್ಕೆಲುಬಿನಲ್ಲಿ ಆಂತರಿಕ ರಕ್ತಸ್ರಾವವಾಗಿದೆ.”
