ಉದಯವಾಹಿನಿ, ರಾಂಚಿ: ಒಂದು ಕಾಲದಲ್ಲಿ ಭಾರತದ ಉಕ್ಕಿನ ಉದ್ಯಮಕ್ಕೆ ಶಕ್ತಿ ತುಂಬುತ್ತಿದ್ದ ಉತ್ತಮ ಗುಣಮಟ್ಟದ ಕಲ್ಲಿದ್ದಲ್ಲಿಗೆ ಹೆಸರುವಾಸಿಯಾಗಿದ್ದ ಈ ಸಣ್ಣ ಜಾರ್ಖಂಡ್ ಪಟ್ಟಣವು ಈಗ ಹೊಗೆ ಮತ್ತು ಬೆಂಕಿಯ ಕೆಂಡದ ರೂಪದಲ್ಲಿದ್ದು, ಭೂಮಿಯು ಇನ್ನೂ ತಣ್ಣಗಾಗಿಲ್ಲ. ಅತಿದೊಡ್ಡ ಸಂಪನ್ಮೂಲವಾಗಿದ್ದ ಪ್ರದೇಶವು ಇದೀಗ ಗಂಭೀರ ಪರಿಸ್ಥಿತಿಯಲ್ಲಿದ್ದೆ. ಭೂಗತ ಕಲ್ಲಿದ್ದಲ್ಲಿನ ಬೆಂಕಿಯು ಝಾರಿಯಾದಲ್ಲಿ ಭೂಮಿಯನ್ನು ಕಬಳಿಸುತ್ತಿದೆ ಮತ್ತು ಜನರು, ಪ್ರಾಣಿ-ಪಕ್ಷಿಗಳ ಜೀವಕ್ಕೆ ಅಪಾಯವನ್ನುಂಟುಮಾಡುತ್ತಿದೆ.
1916ರ ಸುಮಾರಿಗೆ ಪ್ರಾರಂಭವಾದ ಕಲ್ಲಿದ್ದಲು ಗಣಿ ಬೆಂಕಿಯು ನೈಸರ್ಗಿಕ ವಿಕೋಪವಲ್ಲ, ಬದಲಾಗಿ ಅವೈಜ್ಞಾನಿಕ ಗಣಿಗಾರಿಕೆ ಮತ್ತು ಕಳಪೆ ಸುರಕ್ಷತಾ ಕ್ರಮಗಳ ಪರಿಣಾಮವಾಗಿತ್ತು. ಗಣಿಗಾರಿಕೆಯ ನಂತರ, ಹಲವಾರು ಗಣಿ ವಿಭಾಗಗಳನ್ನು ತೆರೆದಿಡಲಾಯಿತು. ಇದರಿಂದಾಗಿ ಕಲ್ಲಿದ್ದಲು ಗಾಳಿಯ ಸಂಪರ್ಕಕ್ಕೆ ಬಂದಾಗ ಬೆಂಕಿ ಹೊತ್ತಿಕೊಂಡಿತು. ಸಣ್ಣದಾಗಿ ಪ್ರಾರಂಭವಾದ ಬೆಂಕಿಯು ಈಗ ವಿಶಾಲವಾದ ಭೂಗತ ಪದರಗಳ ಮೂಲಕ ಹರಡಿ, ಝಾರಿಯಾದಲ್ಲಿ ನೂರಾರು ಚದರ ಕಿಲೋಮೀಟರ್‌ಗಳನ್ನು ಆವರಿಸಿದೆ.
ಮೇಲ್ಮೈ ಕೆಳಗೆ ಕಲ್ಲಿದ್ದಲು ಹೊಗೆಯಾಡುತ್ತಲೇ ಇದ್ದು, ತೀವ್ರವಾದ ಶಾಖ ಮತ್ತು ವಿಷಕಾರಿ ಅನಿಲಗಳನ್ನು ಬಿಡುಗಡೆ ಮಾಡುತ್ತದೆ. ಹಲವಾರು ಪ್ರದೇಶಗಳಲ್ಲಿ, ನೆಲವು ತುಂಬಾ ದುರ್ಬಲಗೊಂಡಿದ್ದು, ಅದು ಯಾವುದೇ ಕ್ಷಣದಲ್ಲಿ ಕುಸಿಯಬಹುದು. ಹೀಗಾಗಿ ಜನರು ಪ್ರಾಣಾಪಾಯದ ಜೊತೆಗೇ ಜೀವನ ನಡೆಸುವಂತಾಗಿದೆ.
ಶತಮಾನಗಳಷ್ಟು ಹಳೆಯದಾದ ಈ ಬೆಂಕಿಯ ಹೊಡೆತಕ್ಕೆ ಝಾರಿಯಾದ ಜನರು ತತ್ತರಿಸುತ್ತಿದ್ದಾರೆ. ಕಲ್ಲಿದ್ದಲು ಬೆಂಕಿಯಿಂದಾಗಿ ನೆಲ ಕುಸಿದು, ಮನೆಗಳು ಮತ್ತು ರಸ್ತೆಗಳು ನಾಶವಾಗಿವೆ. ಇಂಗಾಲದ ಮಾನಾಕ್ಸೈಡ್ ಮತ್ತು ಸಲ್ಫರ್ ಡೈಆಕ್ಸೈಡ್‌ನಂತಹ ವಿಷಕಾರಿ ಅನಿಲಗಳು ಗಾಳಿಯನ್ನು ಕಲುಷಿತಗೊಳಿಸುತ್ತಿವೆ. ಇದರಿಂದಾಗಿ ಉಸಿರಾಟದ ಕಾಯಿಲೆಗಳು, ಚರ್ಮದ ಸಮಸ್ಯೆಗಳು ಮತ್ತು ಶ್ವಾಸಕೋಶದ ಕಾಯಿಲೆಗಳು ಹೆಚ್ಚಾಗುತ್ತಿವೆ. ಭೂಗತ ಶಾಖವು ಜೀವನವನ್ನು ಅಸಹನೀಯವಾಗಿಸುತ್ತಿದೆ ಮತ್ತು ಅನೇಕ ನಿವಾಸಿಗಳು ಸ್ಥಳಾಂತರಗೊಳ್ಳಲು ಒತ್ತಾಯಿಸಲ್ಪಟ್ಟರೂ, ಬಡತನ ಮತ್ತು ಸೀಮಿತ ಉದ್ಯೋಗಾವಕಾಶಗಳು ಅವರನ್ನು ಅಪಾಯದಲ್ಲಿ ಸಿಲುಕಿಸುತ್ತಿವೆ.
