ಉದಯವಾಹಿನಿ, ಚೆನ್ನೈ: ತಮಿಳುನಾಡಿನ ಕರೂರು ಕಾಲ್ತುಳಿತ ಪ್ರಕರಣದ ಒಂದು ತಿಂಗಳ ಬಳಿಕ ಮೃತರ ಕುಟುಂಬಸ್ಥರನ್ನು ಸುಮಾರು 400 ಕಿ.ಮೀ. ದೂರದ ಮಹಾಬಲಿಪುರಂ ಖಾಸಗಿ ರೆಸಾರ್ಟ್‌ಗೆ ಕರೆಸಿಕೊಂಡು ತಮಿಳಗ ವೆಟ್ರಿ ಕಳಗಂ ನಾಯಕ ವಿಜಯ್ ಭೇಟಿಯಾಗಿದ್ದು, ಇದೀಗ ವಿವಾದ ಸೃಷ್ಟಿಸಿದೆ. ವಿಜಯ್ ಅವರ ಈ ಕ್ರಮವು 800 ಕಿ.ಮೀ.ಯ ಕಷ್ಟದ ಯಾತ್ರೆ ಎಂದು ವಿಪಕ್ಷಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಟೀಕಿಸಿದ್ದಾರೆ.
ಐದು ಬಸ್‌ಗಳಲ್ಲಿ 37 ಮೃತರ ಕುಟುಂಬಸ್ಥರನ್ನು ಕರೂರಿನಿಂದ ಮಹಾಬಲಿಪುರಂಗೆ ಕರೆದೊಯ್ಯಲಾಯಿತು. ಇದು ರಾಜ್ಯ ರಾಜಧಾನಿಯಿಂದ 50 ಕಿ.ಮೀ. ದೂರದಲ್ಲಿದೆ. ಟಿವಿಕೆ ಪಕ್ಷವು ಐಷಾರಾಮಿ ರೆಸಾರ್ಟ್‌ನಲ್ಲಿ ಸುಮಾರು 50 ಕೊಠಡಿಗಳನ್ನು ಬುಕ್ ಮಾಡಿ, ಸಂತ್ರಸ್ತರ ಕುಟುಂಬಸ್ಥರೊಂದಿಗೆ ಬಾಗಿಲು ಮುಚ್ಚಿಕೊಂಡು ಸುಮಾರು ಎಂಟು ಗಂಟೆಗಳ ಮಾತುಕತೆ ನಡೆಸಿದೆ ಎಂದು ವರದಿಗಳು ತಿಳಿಸಿವೆ. ಗೌಪ್ಯತೆಯನ್ನು ಕಾಪಾಡಲು ಟಿವಿಕೆ ಕಾರ್ಯಕರ್ತರಿಗೆ ಸಹ ಭೇಟಿಯ ಸ್ಥಳಕ್ಕೆ ಪ್ರವೇಶ ನಿಷೇಧಿಸಲಾಗಿತ್ತು. ವಿಜಯ್ ಎಲ್ಲ ಸಂತ್ರಸ್ತರ ಕುಟುಂಬಸ್ಥರನ್ನು ಪ್ರತ್ಯೇಕವಾಗಿ ಭೇಟಿಯಾಗಿದ್ದು, ಕೆಲವರೊಂದಿಗೆ ಮೂರು ಗಂಟೆಗಳಿಗಿಂತ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ. ಅಲ್ಲದೇ ಸಂತ್ರಸ್ತರನ್ನು ಇಷ್ಟು ದೂರಕ್ಕೆ ಕರೆತಂದಿದ್ದಕ್ಕಾಗಿ ವಿಜಯ್ ಕ್ಷಮೆಯಾಚಿಸಿದ್ದು, ಕರೂರ್‌ಗೆ ಭೇಟಿ ನೀಡಲು ಅನುಮತಿ ಸಿಕ್ಕಿರಲಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.
