ಉದಯವಾಹಿನಿ, ಇಸ್ಲಾಮಾಬಾದ್: ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸೀಮ್ ಮುನೀರ್ ತಮ್ಮ ದೇಶದಲ್ಲಿ ಸರ್ವಾಧಿಕಾರತ್ವವನ್ನು ಸ್ಥಾಪಿಸಲು ಹೊರಟಿದ್ದಾರೆ. ಇದೀಗ ಮುನೀರ್ ಪಾಕಿಸ್ತಾನದ ಸಂವಿಧಾನವನ್ನು ಬದಲಾಯಿಸಲು ಹೊರಟಿದ್ದಾರೆ ತಿಳಿದು ಬಂದಿದೆ. ಇದು ಮುನೀರ್ ಅವರ ಸ್ಥಾನ ಮತ್ತು ಅಧಿಕಾರವನ್ನು ಭದ್ರಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ ಎಂದು ಹೇಳಲಾಗಿದೆ. ಪಿಪಿಪಿ ಮುಖ್ಯಸ್ಥ ಬಿಲಾವಲ್ ಭುಟ್ಟೋ -ಜರ್ದಾರಿ ಅವರ ಟ್ವೀಟ್ ಮೂಲಕ 27 ನೇ ಸಾಂವಿಧಾನಿಕ ತಿದ್ದುಪಡಿಯ ಯೋಜನೆಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಸಾಂವಿಧಾನಿಕ ತಿದ್ದುಪಡಿಗೆ ಬೆಂಬಲಕ್ಕಾಗಿ ಪ್ರಧಾನಿ ಶೆಹಬಾಜ್ ಷರೀಫ್ ತಮ್ಮ ಪಕ್ಷವನ್ನು ಸಂಪರ್ಕಿಸಿದ್ದಾರೆ ಎಂದು ಬಿಲಾವಲ್ ಬಹಿರಂಗಪಡಿಸಿದ್ದಾರೆ.
ಪ್ರಸ್ತಾವಿತ ತಿದ್ದುಪಡಿಗಳು ಸಾಂವಿಧಾನಿಕ ನ್ಯಾಯಾಲಯಗಳು ಮತ್ತು ನ್ಯಾಯಾಧೀಶರ ವರ್ಗಾವಣೆಗೆ ಸಂಬಂಧಿಸಿದ ನಿಬಂಧನೆಗಳನ್ನು ಒಳಗೊಂಡಿದ್ದರೂ, 243 ನೇ ವಿಧಿಗೆ ಬದಲಾವಣೆಗಳನ್ನು ಉಲ್ಲೇಖಿಸಿರುವುದರಿಂದ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. 243 ನೇ ವಿಧಿಯು ಪಾಕಿಸ್ತಾನಿ ಸಶಸ್ತ್ರ ಪಡೆಗಳ ಆಜ್ಞೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದೆ. “ಫೆಡರಲ್ ಸರ್ಕಾರವು ಸಶಸ್ತ್ರ ಪಡೆಗಳ ನಿಯಂತ್ರಣ ಮತ್ತು ಆಜ್ಞೆಯನ್ನು ಹೊಂದಿರುತ್ತದೆ” ಎಂದು ಸಂವಿಧಾನ ಹೇಳುತ್ತದೆ.
