ಉದಯವಾಹಿನಿ, ರಾಮನಗರ: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಾಣವಾಗುತ್ತಿರುವ ಬಿಡದಿ ಇಂಟಿಗ್ರೇಟೆಡ್ ಟೌನ್‌ಶಿಪ್‌ಗೆ ರೈತರು ವಿರೋಧ ವ್ಯಕ್ತಪಡಿಸಿದ್ದು, ಇಂದು ಜಿಲ್ಲಾಧಿಕಾರಿ ನೇತೃತ್ವದ ಸಭೆಯಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಬೆಂಗಳೂರು-ಮೈಸೂರು ಹಳೇ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ ಯಾವುದೇ ಕಾರಣಕ್ಕೂ ಜಮೀನು ನೀಡಲ್ಲ ಎಂಬ ಸಂದೇಶ ರವಾನಿಸಿದ್ದಾರೆ.
ಬಿಡದಿ ಹೋಬಳಿಯ 9 ಗ್ರಾಮಗಳ ಸುಮಾರು 9,600 ಎಕರೆ ವ್ಯಾಪ್ತಿಯಲ್ಲಿ ಟೌನ್‌ಶಿಪ್ ನಿರ್ಮಾಣ ಮಾಡಲು ಸರ್ಕಾರ ಚಿಂತನೆ ನಡೆಸಿದ್ದು, ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿದೆ. ಇದಕ್ಕೆ ಸ್ಥಳೀಯ ರೈತರು ವಿರೋಧ ವ್ಯಕ್ತಪಡಿಸಿ ಕಳೆದ ಎರಡು ತಿಂಗಳಿನಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಇಂದು ಟೌನ್‌ಶಿಪ್ ವ್ಯಾಪ್ತಿಗೆ ಒಳಪಡುವ ಭೂಮಾಲೀಕರು ಹಾಗೂ ರೈತರ ಜೊತೆ ದರ ನಿಗದಿ ಹಾಗೂ ಪುನರ್ವಸತಿ ಕುರಿತು ಸಭೆ ಕರೆದಿದ್ದ ಜಿಲ್ಲಾಧಿಕಾರಿ, ರೈತರಿಗೆ ಅಗೌರವ ತೋರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.
ಇಂದು ಮ.12ಕ್ಕೆ ಯೋಜನೆ ವ್ಯಾಪ್ತಿಗೆ ಒಳಪಡುವ ಎಲ್ಲಾ ರೈತರು ಸಭೆಗೆ ಬನ್ನಿ ಎಂದು ನೋಟೀಸ್ ನೀಡಿದ್ದ ಹಿನ್ನೆಲೆ ಇಂದು 500ಕ್ಕೂ ಹೆಚ್ಚು ರೈತರು ಡಿಸಿ ಕಚೇರಿ ಬಳಿ ಆಗಮಿಸಿದ್ದರು. ಆದರೆ ಸಭೆಗೆ ಕೇವಲ 30 ಮಂದಿ ರೈತರಿಗೆ ಮಾತ್ರ ಅವಕಾಶ ಕೊಡುವುದಾಗಿ ಜಿಲ್ಲಾಡಳಿತ ತಿಳಿಸಿದ ಹಿನ್ನೆಲೆ ಜಿಲ್ಲಾಧಿಕಾರಿ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಬೆಂ-ಮೈ ಹಳೇ ಹೆದ್ದಾರಿ ತಡೆದು ಕೆಲಕಾಲ ಪ್ರತಿಭಟನೆ ನಡೆಸಿ ಬಳಿಕ ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ತಳ್ಳಾಟ-ನೂಕಾಟ ನಡೆದು ಕೆಲ ಪ್ರತಿಭಟನಾಕಾರರನ್ನು ಬಂಧಿಸಲು ಪೊಲೀಸರು ಮುಂದಾದರು. ರೊಚ್ಚಿಗೆದ್ದ ರೈತರು ಬಂಧಿಸಲು ತಂದಿದ್ದ ಕೆಎಸ್‌ಆರ್‌ಟಿಸಿ ಬಸ್‌ನ ನಾಲ್ಕು ಚಕ್ರದ ಗಾಳಿ ತೆಗೆದಿದ್ದು ದೊಡ್ಡ ಹೈಡ್ರಾಮಕ್ಕೆ ಸಾಕ್ಷಿಯಾಯಿತು.

Leave a Reply

Your email address will not be published. Required fields are marked *

error: Content is protected !!