ಉದಯವಾಹಿನಿ, ನವದೆಹಲಿ:ದೇಹ ಮತ್ತು ಮನಸ್ಸು ಆರೋಗ್ಯಕರವಾಗಿರಲು ತಿನ್ನುವ ಆಹಾರ ಸತ್ವಯುತ ವಾಗಿರಬೇಕು ಎಂಬ ಗಿಳಿಪಾಠವನ್ನು ಹಲವಾರು ಬಾರಿ ಕೇಳಿದ್ದೇವೆ. ಅದರಲ್ಲೂ ಒಂದೇ ಬದುಕಿನಲ್ಲಿ ಹಲವು ಬಾರಿ ರೂಪಾಂತರಗೊಳ್ಳುವ ಮಹಿಳೆಯರ ದೇಹಕ್ಕೆ ಸದಾ ಕಾಲ ಸೂಕ್ತ ಪೋಷಕಾಂಶಗಳ ಒದಗುತ್ತಿರಬೇಕು. ಹಾಗೆ ಅಗತ್ಯವಾಗಿ ಬೇಕಾಗುವ ಪೋಷಕಾಂಶಗಳು ಯಾವುದು ಎಂಬುದರ ಅರಿವಿದ್ದರಷ್ಟೇ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ.
ಕಬ್ಬಿಣ: ಮಹಿಳೆಯರ ಮಾಸಿಕ ಸ್ರಾವದ ಕಾರಣದಿಂದಾಗಿ ದೇಹಕ್ಕೆ ಮತ್ತೆಮತ್ತೆ ಮರುಪೂರಣ ಮಾಡುತ್ತಲೇ ಇರಬೇಕಾದ ಸತ್ವವಿದು. ದೇಹದ ಬೆಳವಣಿಗೆ, ಕೆಲವು ಚೋದಕಗಳ ಸ್ರವಿಸುವಿಕೆಗೆ ಮತ್ತು ಆಮ್ಲಜನಕವನ್ನು ದೇಹದೆಲ್ಲೆಡೆ ಪೂರೈಸುವುದಕ್ಕೆ ಅಗತ್ಯವಾದ ಕೆಂಪುರಕ್ತ ಕಣಗಳು ತಯಾರಿಕೆಗೆ ಕಬ್ಬಿಣ ಬೇಕೇಬೇಕು.

ಕೊರತೆಯ ಲಕ್ಷಣಗಳೇನು?: ಕಬ್ಬಿಣದ ಕೊರತೆ ಅಥವಾ ಅನೀಮಿಯದ ಲಕ್ಷಣಗಳ ಬಗ್ಗೆ ಅರಿವು ಅಗತ್ಯ. ವಿಪರೀತ ಸುಸ್ತು, ಆಯಾಸ, ಚರ್ಮ ಒಣಗುವುದು, ಎದೆನೋವು, ಉಸಿರಾಟದ ತೊಂದರೆ, ವೇಗವಾದ ಎದೆ ಬಡಿತ, ತಲೆನೋವು, ಉಗುರು ಮುರಿಯುವುದು ಇತ್ಯಾದಿ.
ಆಹಾರಗಳು: ಒಣಹಣ್ಣು ಮತ್ತು ಬೀಜಗಳು, ಮತ್ಸಾಹಾರ, ಹಸಿರು ಸೊಪ್ಪು ಮತ್ತು ತರಕಾರಿಗಳು, ಬಟಾಣಿ, ಹುರುಳಿಕಾಯಿ ಮತ್ತು ದ್ವಿದಳ ಧಾನ್ಯಗಳಲ್ಲಿ ಕಬ್ಬಿಣ ಅಂಶ ಸಾಂದ್ರಿತವಾಗಿದೆ.
ಫಾಲಿಕ್‌ ಆಮ್ಲ: ವಿಟಮಿನ್‌ ಬಿ ಮತ್ತು ಫಾಲಿಕ್‌ ಆಮ್ಲದ ಮಟ್ಟವನ್ನು ದೇಹದಲ್ಲಿ ಕಾಪಾಡಿ ಕೊಳ್ಳುವುದು ಪ್ರಮುಖವಾದದ್ದು. ದೇಹದಲ್ಲಿ ಹೊಸ ಕೋಶಗಳ ಸೃಷ್ಟಿಗೆ ಬಿ ಜೀವಸತ್ವ ಅಗತ್ಯವಾದರೆ, ನಮ್ಮ ನರಗಳು ಮತ್ತು ಬೆನ್ನುಹುರಿಯ ಆರೋಗ್ಯ ರಕ್ಷಣೆಗೆ ಫಾಲಿಕ್‌ ಆಮ್ಲ ಬೇಕು. ಅದರಲ್ಲೂ ಗರ್ಭಿಣಿ ಮಹಿಳೆಯರಿಗೆ ಇದು ಅತಿ ಅಗತ್ಯವಾದ ಸತ್ವ. ಗರ್ಭದಲ್ಲಿರುವ ಶಿಶುವಿನ ಮೆದುಳಿನ ಮತ್ತು ಬೆನ್ನು ಹುರಿಯ ಬೆಳವಣಿಗೆ ಕುಂಠಿತವಿಲ್ಲದೆ ಸಾಗಬೇಕಾದರೆ ಫಾಲಿಕ್‌ ಆಮ್ಲ ಇರಲೇಬೇಕು.

Leave a Reply

Your email address will not be published. Required fields are marked *

error: Content is protected !!