ಉದಯವಾಹಿನಿ, ನವದೆಹಲಿ: ಕೇಂದ್ರ ಸರ್ಕಾರ ಈಗ 8ನೇ ವೇತನ ಆಯೋಗದ ಪ್ರಸ್ತಾವನೆಗಳ ಪರಿಶೀಲನೆಯನ್ನು ನಡೆಸುತ್ತಿದೆ. ಇದರಲ್ಲಿ ಕೇವಲ ನೌಕರರ ವೇತನ ಹೆಚ್ಚಳ ಮಾತ್ರವಲ್ಲ ಬೋನಸ್ ಗ್ರಾಚ್ಯುಟಿ ಮತ್ತು ಇತರ ಹಲವಾರು ಸವಲತ್ತುಗಳ ಕುರಿತು ಕೂಡ ಪರಿಶೀಲನೆ ನಡೆಸಲಾಗುತ್ತಿದೆ. ನ್ಯಾಯಮೂರ್ತಿ ರಂಜನಾ ದೇಸಾಯಿ ನೇತೃತ್ವದ ತ್ರಿಸದಸ್ಯ ಸಮಿತಿಯು ಈ ನಿಟ್ಟಿನಲ್ಲಿ ಕಾರ್ಯ ಪ್ರಾರಂಭಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕೊನೆಗೂ 8ನೇ ವೇತನ ಆಯೋಗಕ್ಕೆ ಸೂಚನೆ ನೀಡಿದೆ.
ಈ ಕುರಿತು ಹಣಕಾಸು ಸಚಿವಾಲಯ ನವೆಂಬರ್ 3ರಂದು ಅಧಿಸೂಚನೆಯನ್ನು ಹೊರಡಿಸಿದ್ದು, ಇದರಲ್ಲಿ ಆಯೋಗದ ರಚನೆ ಮತ್ತು ನಿಯಮಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಉಲ್ಲೇಖಿಸಲಾಗಿದೆ. 8ನೇ ವೇತನ ಆಯೋಗವು ಸರ್ಕಾರಿ ನೌಕರರ ವೇತನ, ಪಿಂಚಣಿ ಪರಿಷ್ಕರಣೆಯನ್ನು ಮಾತ್ರ ನಡೆಸುತ್ತಿಲ್ಲ. ಇದರೊಂದಿಗೆ ಭತ್ಯೆ, ಬೋನಸ್, ಗ್ರಾಚ್ಯುಟಿ ಮತ್ತು ಕಾರ್ಯಕ್ಷಮತೆಗೆ ಸಂಬಂಧಿಸಿ ಹಲವಾರು ಇತರ ಹಣಕಾಸಿನ ಪ್ರಯೋಜನಗಳನ್ನು ಕೂಡ ಪರಿಶೀಲಿಸುತ್ತಿದೆ. ಹಿಂದಿನ ಆಯೋಗಗಳಂತೆ ಈ ಸಮಿತಿಯು ವೇತನ ಸುಧಾರಣೆ ಮತ್ತು ಪ್ರಯೋಜನಗಳ ಕುರಿತು ಬದಲಾವಣೆಗಳಿಗೆ ಶಿಫಾರಸು ಮಾಡಲಿದೆ.
8ನೇ ವೇತನ ಆಯೋಗದಲ್ಲಿ ನ್ಯಾಯಮೂರ್ತಿ ದೇಸಾಯಿ ಅವರು ಅಧ್ಯಕ್ಷರಾಗಿದ್ದು, ಪ್ರೊ. ಪುಲಕ್ ಘೋಷ್ ಅವರು ಅರೆಕಾಲಿಕ ಸದಸ್ಯರು ಮತ್ತು ಪಂಕಜ್ ಜೈನ್ ಅವರು ಸದಸ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿರುತ್ತಾರೆ ಎಂದು ಸರ್ಕಾರ ಅಧಿಸೂಚನೆಯಲ್ಲಿ ತಿಳಿಸಿದೆ. ನವದೆಹಲಿಯಲ್ಲಿರುವ ಆಯೋಗದ ಪ್ರಧಾನ ಕಚೇರಿಯು 18 ತಿಂಗಳೊಳಗೆ ಸರ್ಕಾರಕ್ಕೆ ತನ್ನ ಶಿಫಾರಸುಗಳನ್ನು ಸಲ್ಲಿಸಲಿದೆ. ಅಗತ್ಯವಿದ್ದರೆ ಮಧ್ಯಂತರ ವರದಿಯನ್ನು ಕೂಡ ಸಲ್ಲಿಸುವ ಸಾಧ್ಯತೆ ಇರುತ್ತದೆ.
