ಉದಯವಾಹಿನಿ, ನವದೆಹಲಿ: ಏಕದಿನ ವಿಶ್ವಕಪ್ ಭಾರತ ತಂಡದ ಆಟಗಾರ್ತಿಯರು ಪ್ರಧಾನಿ ಮೋದಿ ಅವರನ್ನು ಲೋಕಕಲ್ಯಾಣ ಮಾರ್ಗದ ಅಧಿಕೃತ ನಿವಾಸದಲ್ಲಿ ಭೇಟಿ ಮಾಡಿದ್ದರು. ಈ ವೇಳೆ ಪ್ರಧಾನಿ ಮೋದಿ, ಗಾಲಿಕುರ್ಚಿಯಲ್ಲಿ ಕುಳಿತಿದ್ದ ಪ್ರತಿಕಾ ರಾವಲ್‌ಗೆ ಆಹಾರ ಬಡಿಸಿದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಟಗಾರ್ತಿಯರು ಪ್ರಧಾನಿ ಸುತ್ತ ಕುರ್ಚಿಯಲ್ಲಿ ಕುಳಿತು ಸಂವಾದವನ್ನೂ ನಡೆಸಿದರು. ಆ ಬಳಿಕ ಔತಣ ಕೂಟದಲ್ಲಿ ಪಾಲ್ಗೊಂಡರು. ಈ ವೇಳೆ ಗಾಲಿಕುರ್ಚಿಯಲ್ಲಿ ಕುಳಿತಿದ್ದ ಪ್ರತಿಕಾ ರಾವಲ್ ಬಳಿ ಬಂದ ಮೋದಿ, ಯಾರೂ ನಿಮಗೆ ಏನನ್ನೂ ನೀಡುತ್ತಿಲ್ಲ. ನಿಮಗೆ ಏನು ಇಷ್ಟ? ಎಂದು ಕೇಳಿದರು. ಬಳಿಕ ಅಲ್ಲಿದ್ದ ಆಹಾರವೊಂದನ್ನು ತಂದು ಕೊಟ್ಟರು. ಆಶ್ಚರ್ಯ ಮತ್ತು ಕೃತಜ್ಞತೆಯಿಂದ, ಪ್ರತಿಕಾ “ತುಂಬಾ ಧನ್ಯವಾದಗಳು ಸರ್” ಎಂದು ಪ್ರತಿಕ್ರಿಯಿಸಿದರು. ಸದ್ಯ ಈ ಹೃದಯಸ್ಪರ್ಶಿ ವಿಡಿಯೊ ನೆಟ್ಟಿಗರ ಮನ ಗೆದ್ದಿದೆ. ಕೊನೇ ಲೀಗ್ ಪಂದ್ಯದ ವೇಳೆ ಕಾಲಿನ ಗಾಯಕ್ಕೊಳಗಾಗಿ ವಿಶ್ವಕಪ್ನಿಂದ ಹೊರಬಿದ್ದಿದ್ದ ಆರಂಭಿಕ ಬ್ಯಾಟುಗಾರ್ತಿ ಪ್ರತಿಕಾ ರಾವಲ್, ಫೈನಲ್ ಗೆಲುವಿನ ಬಳಿಕ ಗಾಲಿಕುರ್ಚಿಯಲ್ಲೇ ಬಂದು ಭಾರತ ತಂಡದ ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು. ಟೂರ್ನಿಯಲ್ಲಿ ಭಾರತ ಪರ 2ನೇ ಸರ್ವಾಧಿಕ ರನ್ (308) ಗಳಿಸಿದ ನಡುವೆಯೂ ಪ್ರತಿಕಾಗೆ ವಿಶ್ವಕಪ್ ಗೆಲುವಿನ ಪದಕ ದೊರೆಯದಿದ್ದುದು ವಿಪರ್ಯಾಸ. ಫೈನಲ್ ಪಂದ್ಯಕ್ಕೆ ತಂಡದಲ್ಲಿರದ ಕಾರಣ ಅವರು, ಐಸಿಸಿ ನಿಯಮಾವಳಿ ಪ್ರಕಾರ ವಿನ್ನರ್ಸ್ ಮೆಡಲ್ ಪಡೆಯಲು ಅರ್ಹರಾಗಿರಲಿಲ್ಲ. ಆದರೆ ಭಾರತ ತಂಡದ ಪ್ರಶಸ್ತಿ ಗೆಲುವಿನಲ್ಲಿ ಪ್ರತಿಕಾ ಪಾತ್ರವೂ ಪ್ರಮುಖವಾದುದು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
ಫಿಟ್ ಇಂಡಿಯಾ ಅಭಿಯಾನದ ಸಂದೇಶವನ್ನು ದೇಶದೆಲ್ಲೆಡೆ, ಅದರಲ್ಲೂ ಪ್ರಮುಖವಾಗಿ ಬಾಲಕಿಯರಿಗೆ ತಲುಪಿಸುವಂತೆ ಪ್ರಧಾನಿ, ಆಟಗಾರ್ತಿಯರನ್ನು ಕೇಳಿಕೊಂಡರು. ಈ ವೇಳೆ 2017ರ ವಿಶ್ವಕಪ್ನಲ್ಲಿ ರನ್ನರ್ಅಪ್ ಸ್ಥಾನಕ್ಕೆ ತೃಪ್ತಿಪಟ್ಟ ಬಳಿಕ ಪ್ರಧಾನಿ ಮೋದಿ ಅವರನ್ನು ಟ್ರೋಫಿ ರಹಿತವಾಗಿ ಭೇಟಿಯಾಗಿದ್ದ ಕ್ಷಣವನ್ನು ನಾಯಕಿ ಹರ್ಮಾನ್ಪ್ರೀತ್ ಕೌರ್ ಮೆಲುಕು ಹಾಕಿದರು.
