ಉದಯವಾಹಿನಿ, ನವದೆಹಲಿ: ಇಂಗ್ಲೆಂಡ್ ವಿರುದ್ದದ ಆಷಸ್ ಟೆಸ್ಟ್ ಸರಣಿಗೆ 15 ಸದಸ್ಯರ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ. ಹಿರಿಯ ಬ್ಯಾಟ್ಸ್‌ಮನ್ ಮಾರ್ನಸ್ ಲಾಬುಶೇನ್ ಅವರು ದೀರ್ಘಾವಧಿ ಬಳಿಕ ಟೆಸ್ಟ್ ತಂಡಕ್ಕೆ ಮರಳಿದ್ದಾರೆ. ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮಾರ್ನಸ್ ಲಾಬುಶೇನ್ ಆಡಿರಲಿಲ್ಲ. ಇದೀಗ ಅವರು ಆಷಸ್‌ನಂತಹ ಮಹತ್ವದ ಟೆಸ್ಟ್ ಸರಣಿಯಲ್ಲಿ ಆಡಲಿದ್ದಾರೆ. ಆ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಬಲ ಬಂದಂತಾಗಿದೆ. ಇತ್ತೀಚೆಗೆ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಹೆಚ್ಚಿನ ರನ್‌ಗಳನ್ನು ಕಲೆ ಹಾಕುವ ಮೂಲಕ ತಮ್ಮ ವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದಾರೆ.
ಓಪನಿಂಗ್ ಬ್ಯಾಟ್ಸ್‌ಮನ್ ಜೇಕ್ ವೆದರಾಲ್ಡ್ ಅವರು ನವೆಂಬರ್ 21 ರಿಂದ 25ರ ವರೆಗೆ ನಡೆಯುವ ಆರಂಭಿಕ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಮ್ಯಾಟ್ ರೆನ್ಷಾ ಹಾಗೂ ಸ್ಯಾಮ್ ಕೊನ್ಸ್ಟಸ್ ಅವರ ಬದಲಿಗೆ ತಂಡಕ್ಕೆ ಆಯ್ಕೆಯಾಗಿದ್ದಾರೆ. ಉಸ್ಮಾನ್ ಖವಾಜ ಅವರ ಜೊತೆ ಯಾರು ಇನಿಂಗ್ಸ್ ಆರಂಭಿಸಲಿದ್ದಾರೆಂಬುದು ತೀವ್ರ ಕುತೂಹಲವನ್ನು ಕೆರಳಿಸಿದೆ.
21ರ ಪ್ರಾಯದ ಬ್ಯಾಟ್ಸ್‌ಮನ್ ವೆದರಾಲ್ಡ್ ಅವರು ಶೆಫಿಲ್ಡ್ ಶೀಲ್ಡ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಆಗಿದ್ದಾರೆ. ಅವರು ಕಳೆದ ಬೇಸಿಗೆಯಲ್ಲಿ 50.33ರ ಸರಾಸರಿಯಲ್ಲಿ 906 ರನ್‌ಗಳನ್ನು ಕಲೆ ಹಾಕಿದ್ದರು. ಅಲ್ಲದೆ ಈ ವರ್ಷದ ಮಧ್ಯೆದಲ್ಲಿ ಅವರು ಶ್ರೀಲಂಕಾ ಎ ವಿರುದ್ದ 906 ರನ್‌ಗಳನ್ನು ಕಲೆ ಹಾಕಿದ್ದರು. ಕೆಳ ಬೆನ್ನಿನ ಗಾಯದಿಂದ ಗುಣಮುಖರಾಗುತ್ತಿರುವ ಪ್ಯಾಟ್ ಕಮಿನ್ಸ್ ಅವರು ಆರಂಭಿಕ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಹಾಗಾಗಿ ಅವರ ಸ್ಥಾನದಲ್ಲಿ ಆಸ್ಟ್ರೇಲಿಯಾ ತಂಡವನ್ನು ಸ್ಟೀವನ್ ಸ್ಮಿತ್ ಮುನ್ನಡೆಸಲಿದ್ದಾರೆ.
