ಉದಯವಾಹಿನಿ, ಹಾವೇರಿ: ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆಯ ಮಾಲೀಕರು ಶಾಸಕರು, ಮಾಜಿ ಸಚಿವರು, ಸಚಿವರಾಗಿರುವ ಕಾರಣ ಅವರ ಲಾಬಿ ಮಣಿದು ಸರ್ಕಾರ ದರ ನಿಗದಿ ಮಾಡಲು ಹಿಂದೇಟು ಹಾಕುತ್ತಿದೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಕಿಡಿಕಾರಿದ್ದಾರೆ. ಇಂದು ಹಾವೇರಿಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಬೃಹತ್ ಟ್ಯಾಕ್ಟರ್ ರ‍್ಯಾಲಿ ಮಾಡಲಾಯಿತು. ಹಾವೇರಿ ಮುರುಘರಾಜೇಂದ್ರ ಮಠದಿಂದ ಪ್ರತಿಭಟನೆ ಆರಂಭಿಸಿ, ಜಿಲ್ಲಾಧಿಕಾರಿ ಕಚೇರಿ ವರೆಗೆ ಟ್ಯಾಕ್ಟರ್ ರ್ಯಾಲಿ ನಡೆಸಲಾಯಿತು. ಈ ವೇಳೆ ಮಾತಮಾಡಿದ ಅವರು, ಪ್ರತಿ ಟನ್ ಕಬ್ಬಿಗೆ 3,500 ರೂ. ದರವನ್ನ ನೀಡಬೇಕು. ಮಹಾರಾಷ್ಟ್ರದಲ್ಲಿ ಇದೆ ಕಬ್ಬು ಬೆಳೆಯುತ್ತಿದ್ದಾರೆ. ಅಲ್ಲಿ ರೈತರು ಭೂಮಿ ಒಂದೇ, ನೀರು ಒಂದೇ , ಹಾಗಾದರೆ ಬೆಲೆ ಮಾತ್ರ ವ್ಯತ್ಯಾಸ ಮಾಡುತ್ತಿದ್ದಾರೆ ಎಂದು ಸಿಟ್ಟು ಹೊರಹಾಕಿದರು.ಸರ್ಕಾರ ಯಾವುದೇ ಲಾಬಿಗೆ ಮಣಿಯದೇ ರೈತರ ಹಿತ ಕಾಪಾಡುವ ಕೆಲಸ ಮಾಡಬೇಕು. ಸರ್ಕಾರಕ್ಕೆ ಕಾರ್ಖಾನೆ ಮಾಲೀಕರಿಗೆ ಹೇಳುವ ಧಮ್ ಇಲ್ಲ. ಖಾಸಗಿ ಕಾರ್ಖಾನೆಗಳ ಪ್ರಭಾವ ಹೆಚ್ಚಾಗಿದೆ. ದರ ನಿಗದಿ ಮಾಡಿ ಸರ್ಕಾರದ ಹಿತ ಕಾಪಾಡುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
