ಉದಯವಾಹಿನಿ, ಬೆಂಗಳೂರು : ಬೆಂಗಳೂರಲ್ಲಿ ಡ್ರಗ್ಸ್ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿರುವ ಕಸ್ಟಮ್ಸ್ ಅಧಿಕಾರಿಗಳು, ವಿದೇಶದಿಂದ ರಾಜ್ಯಕ್ಕೆ ಕಳ್ಳ ಮಾರ್ಗದಲ್ಲಿ ಹರಿದು ಬರುತ್ತಿದ್ದ 52.87 ಕೋಟಿ ರು. ಮೌಲ್ಯದ ಡ್ರಗ್ಸ್ ಅನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಪ್ತಿ ಮಾಡಿದ್ದಾರೆ. ದೇವನಹಳ್ಳಿಯ ವಿಮಾನ ನಿಲ್ದಾಣದಲ್ಲಿ ಅ.29 ರಿಂದ ನ.5 ವರೆಗೆ ಪ್ರತ್ಯೇಕವಾಗಿ ಈ ಕಾರ್ಯಾಚರಣೆ ನಡೆದಿದ್ದು, ಬ್ಯಾಂಕಾಕ್‌ನಿಂದ ಬಂದಿಳಿದ ನಾಲ್ವರು ಪ್ರಯಾಣಿಕರು ಕಸ್ಟಮ್ಸ್ ಬಲೆಗೆ ಬಿದ್ದಿದ್ದಾರೆ.
ಈ ಪೆಡ್ಲರ್‌ಗಳಿಂದ 52.87 ಕೋಟಿ ರು. ಮೌಲ್ಯದ 52 ಕೆಜಿ ಹೈಡ್ರೋ ಗಾಂಜಾ ಜಪ್ತಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬ್ಯಾಂಕಾಕ್‌ನಿಂದ ಹೈಡ್ರೋ ಗಾಂಜಾ ಸಾಗಾಣಿಕೆ ಬಗ್ಗೆ ಸಿಕ್ಕ ಮಾಹಿತಿ ಆಧರಿಸಿ ಬ್ಯಾಂಕಾಕ್‌ನಿಂದ ಕೆಐಎಗೆ ಆಗಮಿಸಿಸುವ ವಿಮಾನಗಳ ಮೇಲೆ ಕಣ್ಣಿಡಲಾಯಿತು. ಅ.29 ರಂದು ಓರ್ವ ಪ್ರಯಾಣಿಕ ಸಿಕ್ಕಿಬಿದ್ದರು. ಈತನ ಬಳಿ 37.88 ಕೋಟಿ ಮೌಲ್ಯದ 37 ಕೆಜಿ ಗಾಂಜಾ ಪತ್ತೆಯಾಗಿದೆ.

ಮರುದಿನ ಮತ್ತಿಬ್ಬರು ಬ್ಯಾಂಕಾಕ್‌ನಿಂದ ಬಂದವರ ಬಳಿ 8.49 ಕೋಟಿ ಮೌಲ್ಯದ 8.49ಗಾಂಜಾ ಸಿಕ್ಕಿತು. ಅದೇ ದೇಶದಿಂದ ನ.1 ರಂದು ಬಂದಿಳಿದ ಪೆಡ್ಲರ್ ಬಳಿ 3.18 ಕೋಟಿ ಬೆಲೆ, ನ.5 ರಂದು ಬಂದ ಪೆಡ್ಲರ್ ಹತ್ತಿರ 3.32 ಕೋಟಿಯ ಗಾಂಜಾ ಸಿಕ್ಕಿದೆ. ವಿದೇಶದಿಂದ ಬರುವ ವೇಳೆ ಬ್ಯಾಗ್‌ಗಳಲ್ಲಿ ಹೈಡ್ರೋ ಗಾಂಜಾವನ್ನು ಅಡಗಿಸಿ ತಂದಿದ್ದರು. ಮೇಲ್ನೋಟಕ್ಕೆ ಸಾಮಾನ್ಯ ಬ್ಯಾಗ್‌ನಂತೆ ಕಾಣುತ್ತಿತ್ತು. ಆದರೆ ಪರಿಶೀಲಿಸಿದಾಗ ಗಾಂಜಾ ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಥೈಲ್ಯಾಂಡ್ ಸೇರಿ ಕೆಲ ದೇಶಗಳಲ್ಲಿ ಹೈಡ್ರೋ ಗಾಂಜಾವನ್ನು ಡ್ರಗ್ಸ್ ಮಾಫಿಯಾ ಸದಸ್ಯರು ತಯಾರಿಸುತ್ತಾರೆ. ಆನ್‌ಲೈನ್ ಮೂಲಕವೇ ಆ ಗಾಂಜಾವನ್ನು ತರಿಸಿಕೊಳ್ಳುತ್ತಾರೆ. ಇದರ ಬೆಲೆ1 ಕೆಜಿ 1 ಕೋಟಿ ರು. ಇದೆ.

Leave a Reply

Your email address will not be published. Required fields are marked *

error: Content is protected !!