ಉದಯವಾಹಿನಿ, ಕಾರವಾರ: ಜನ ಗಣ ಮನ ಬ್ರಿಟಿಷ್ ಅಧಿಕಾರಿಯ ಸ್ವಾಗತಕ್ಕೆ ರಚಿಸಿದ್ದ ಗೀತೆಯಾಗಿದೆ. ವಂದೇ ಮಾತರಂ ನಮ್ಮ ರಾಷ್ಟ್ರಗೀತೆ ಆಗಬೇಕಿತ್ತು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹೇಳಿದ್ದು, ಈ ಹೇಳಿಕೆ ವಿವಾದ ಸೃಷ್ಟಿಸಿದೆ. ಹೊನ್ನಾವರದಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್ 150ನೇ ಜನ್ಮ ದಿನಾಚರಣೆ ಅಂಗವಾಗಿ ನಡೆದ ʼಏಕತೆಗಾಗಿ ನಡಿಗೆʼ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕಾಗೇರಿಯವರು ಈ ಮಾತು ಹೇಳಿದ್ದರು. ಇದೀಗ ಈ ಹೇಳಿಕೆಗೆ ಕಾಂಗ್ರೆಸ್ ಮುಖಂಡರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಬಂಕಿಮ್ ಚಂದ್ರ ಚಟರ್ಜಿ ಬರೆದ ವಂದೇ ಮಾತರಂ ಜನ ಗಣ ಮನಕ್ಕೆ ಸಮನಾಗಿದೆ. ವಂದೇ ಮಾತರಂ ಅನ್ನು ರಾಷ್ಟ್ರಗೀತೆಯನ್ನಾಗಿ ಮಾಡಲು ಸಾಕಷ್ಟು ಒತ್ತಡವಿತ್ತು. ಆದರೆ, ನಮ್ಮ ಪೂರ್ವಜರು ಬ್ರಿಟಿಷ್ ಅಧಿಕಾರಿ ಸ್ವಾಗತಕ್ಕೆ ಜನ ಗಣ ಮನವನ್ನು ಹಾಗೂ ರಾಷ್ಟ್ರೀಯ ಗೀತೆಯಾಗಿ ವಂದೇ ಮಾತರಂ ಅನ್ನು ರಚಿಸಿದ್ದರು. ಆದ್ದರಿಂದ ನಾವು ಎರಡೂ ರಾಷ್ಟ್ರಗೀತೆಗಳನ್ನು ಹೊಂದಿದ್ದೇವೆಂದು ಕಾಗೇರಿ ಹೇಳಿದರು. ಸ್ವಾತಂತ್ರ್ಯ ಹೋರಾಟಕ್ಕೆ ವಂದೇ ಮಾತರಂ ಗೀತೆ ಪ್ರೇರಣೆ ನೀಡಿತ್ತು. ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆಗಳಿಂದಾಗಿ ವಂದೇ ಮಾತರಂ ಯಾವಾಗಲೂ ನಮಗೆ ಸ್ಫೂರ್ತಿ ನೀಡಿದೆ. ಈ ಗೀತೆ 150 ವರ್ಷ ಹಳೆಯದು. ವಂದೇ ಮಾತರಂ ಎಲ್ಲೆಡೆ ಪಠಿಸಲ್ಪಡಬೇಕು. ಅದು ಎಲ್ಲೆಡೆ ಪ್ರತಿಧ್ವನಿಸಬೇಕು ಎಂದು ತಿಳಿಸಿದರು.
