ಉದಯವಾಹಿನಿ, ಬಿಹಾರ: ದೇಶದ ಗಮನ ಸೆಳೆದಿದ್ದ ಬಿಹಾರ ವಿಧಾನ ಸಭಾ ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆ ಗುರುವಾರ ಪೂರ್ಣಗೊಂಡಿದೆ. ಈ ಬಾರಿ ಹೆಚ್ಚಿನ ಮತದಾನವಾಗಿದ್ದು ಮೊದಲ ಹಂತದಲ್ಲಿ ಶೇ. 64.66ರಷ್ಟು ಮತದಾನವಾಗಿದೆ. 2020ರ ವಿಧಾನಸಭಾ ಚುನಾವಣೆಯಲ್ಲಿ ಶೇ. 56.1ರಷ್ಟು ಮತದಾನವಾಗಿತ್ತು. ಇದನ್ನು ಗಮನಿಸಿದರೆ ಈ ಬಾರಿ ಬಿಹಾರದಲ್ಲಿ ಅತ್ಯಧಿಕ ಮತದಾನವಾಗಿದೆ. ಇದರಿಂದ ಯಾರಿಗೆ ಲಾಭ, ಯಾರಿಗೆ ನಷ್ಟ ಎನ್ನುವ ಲೆಕ್ಕಾಚಾರಗಳು ಈಗಾಗಲೇ ಆರಂಭವಾಗಿವೆ.
ಬಿಹಾರ ವಿಧಾನ ಸಭೆಗೆ ಗುರುವಾರ ನಡೆದ ಚುನಾವಣೆಯ ಮೊದಲ ಹಂತದಲ್ಲಿ ಶೇ. 64.66ರಷ್ಟು ದಾಖಲೆಯ ಮತದಾನವಾಗಿದೆ. 2020ರಲ್ಲಿ ಶೇ. 56.1ರಷ್ಟು ಮತದಾನವಾಗಿದ್ದು, ಇದಕ್ಕೆ ಹೋಲಿಸಿದರೆ ಈ ಬಾರಿ ಶೇ.8.5 ರಷ್ಟು ಮತದಾನದಲ್ಲಿ ಹೆಚ್ಚಳವಾಗಿದೆ. ಚುನಾವಣಾ ಕಣದಲ್ಲಿ ಪ್ರಮುಖ ಸ್ಪರ್ಧಿಗಳಾಗಿರುವ ಎನ್‌ಡಿಎ ಮತ್ತು ಮಹಾಘಟಬಂಧನ್ ಎರಡು ಕೂಡ ಇದು ತಮಗೆ ಲಾಭದಾಯಕ ಎಂದು ಬಣ್ಣಿಸಿದೆ.
ಬಿಹಾರ ವಿಧಾನಸಭೆಗೆ ಎರಡನೇ ಹಂತದ ಮತದಾನವು ನವೆಂಬರ್ 11 ರಂದು ನಡೆಯಲಿದ್ದು, ನವೆಂಬರ್ 14 ರಂದು ಫಲಿತಾಂಶಗಳು ಹೊರಬೀಳಲಿವೆ. 18 ಜಿಲ್ಲೆಗಳ 121 ಕ್ಷೇತ್ರಗಳಿಗೆ ಗುರುವಾರ ಮತದಾನ ನಡೆದಿದೆ. ವಾರದ ದಿನವಾದರೂ ಒಟ್ಟು 3.75 ಕೋಟಿ ಮತದಾರರು ಮತ ಚಲಾಯಿಸಿದರು. 2020ರ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ 71 ಕ್ಷೇತ್ರಗಳಿಗೆ ಮತದಾನ ನಡೆದಿದ್ದು, 3.70 ಕೋಟಿ ಅರ್ಹ ಮತದಾರರಲ್ಲಿ 2.06 ಕೋಟಿ ಜನರು ತಮ್ಮ ಮತ ಚಲಾಯಿಸಿದ್ದರು. ಮತದಾನವಾಗಿರುವುದು ಆಡಳಿತ ವಿರೋಧಿ ಅಲೆಯ ಸಂಕೇತವೆಂದು ಬಣ್ಣಿಸಲಾಗುತ್ತಿದೆ.ಬಿಹಾರದ ಚುನಾವಣಾ ಇತಿಹಾಸವು ಮತದಾರರ ಮತದಾನವು ಶೇ. 5ಕ್ಕಿಂತ ಹೆಚ್ಚಾದಾಗಲೆಲ್ಲಾ ಅದು ಸರ್ಕಾರದ ಬದಲಾವಣೆಗೆ ಕಾರಣವಾಗಿದೆ ಎಂಬುದನ್ನು ಸೂಚಿಸುತ್ತದೆ. 1967ರಲ್ಲಿ ಮತದಾನದ ಪ್ರಮಾಣದಲ್ಲಿ ಶೇ. 7ರಷ್ಟು ಹೆಚ್ಚಳವಾಗಿ ಕಾಂಗ್ರೆಸ್ ಮೊದಲ ಬಾರಿಗೆ ಅಧಿಕಾರವನ್ನು ಕಳೆದುಕೊಂಡಿತು. ಕಾಂಗ್ರೆಸ್ಸೇತರ ಪಕ್ಷಗಳ ಒಕ್ಕೂಟ ಅಧಿಕಾರಕ್ಕೆ ಬಂದಿತ್ತು. 1980ರಲ್ಲಿ ಮತದಾನದ ಪ್ರಮಾಣ ಸುಮಾರು ಶೇ. 7ರಷ್ಟು ಹೆಚ್ಚಳವಾಗಿ ಜನತಾ ಪಕ್ಷದ ಸರ್ಕಾರದ ಪತನಗೊಂಡು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಏರಿತ್ತು.
