ಉದಯವಾಹಿನಿ, ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ಕಾವ್ಯಗೋಸ್ಕರ ಗಿಲ್ಲಿ ದೊಡ್ಡ ತ್ಯಾಗ ಮಾಡಿದ್ದಾರೆ. ತಾನು ಮಾಡಿದ ತ್ಯಾಗದಿಂದ ಗಿಲ್ಲಿ ಮನೆಯಿಂದ ಬಂದ ಪತ್ರವನ್ನು ಕಳೆದುಕೊಂಡರು. ಅಷ್ಟೇ ಅಲ್ಲ, ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್‌ನಲ್ಲಿ ಮುಂದುವರಿದರು. ಗಿಲ್ಲಿ ಮಾಡಿದ ತ್ಯಾಗ ಕಂಡು ಕಾವ್ಯ ಕರಗಿಹೋದರು.
ಈ ವಾರ ಸ್ಪರ್ಧಿಗಳಿಗೆ ಅವರವರ ಮನೆಗಳಿಂದ ಪತ್ರಗಳು ಬಂದಿದ್ದವು. ಸ್ಪರ್ಧಿಗಳು ತಮ್ಮ ಮನೆಯ ಪತ್ರಗಳನ್ನು ಓದಬೇಕಾದರೆ ಬಿಗ್ ಬಾಸ್ ನೀಡುವ ಟಾಸ್ಕ್ ಪೂರ್ಣಗೊಳಿಸಬೇಕು. ಇಬ್ಬಿಬ್ಬರು ಸ್ಪರ್ಧಿಗಳನ್ನು ಆಯ್ಕೆ ಮಾಡಿ ಟಾಸ್ಕ್ ನೀಡಲಾಯಿತು. ಗೆದ್ದವರು ತಮ್ಮ ಮನೆಯಿಂದ ಬಂದ ಪತ್ರವನ್ನು ಓದಬಹುದು. ಆದರೆ, ಸೋತವರು ಪತ್ರವನ್ನು ಕಳೆದುಕೊಳ್ಳುವರು ಅಂತ ಸೂಚಿಸಲಾಯಿತು.
ಹೀಗೆ ಸ್ಪರ್ಧೆಯಲ್ಲಿ ಕಾವ್ಯ ಮತ್ತು ಗಿಲ್ಲಿಯನ್ನು ಪ್ರತ್ಯೇಕವಾಗಿ ಕರೆಯಲಾಗಿತ್ತು. ಈ ಟಾಸ್ಕ್‌ನಲ್ಲಿ ಟ್ವಿಸ್ಟ್‌ವೊಂದನ್ನು ನೀಡಲಾಗಿತ್ತು. ಕಾವ್ಯ ಎದುರು ಗಿಲ್ಲಿ ಮನೆಯ ಲೆಟರ್ ಹಾಗೂ ಗಿಲ್ಲಿ ಎದುರು ಕಾವ್ಯ ಮನೆಯ ಲೆಟರ್ ಇಡಲಾಗಿತ್ತು. ಯಾರಾದರು ಒಬ್ಬರು ಮಾತ್ರ ಲೆಟರ್ ಅನ್ನು ಹೊರಗೆ ತರಬಹುದಿತ್ತು. ಅಪ್ಪಿತಪ್ಪಿ ಇಬ್ಬರೂ ಲೆಟರ್ ತಂದರೆ, ಇಬ್ಬರೂ ಕೂಡ ಲೆಟರ್ ಕಳೆದುಕೊಂಡು ನಾಮಿನೇಷನ್‌ನಲ್ಲಿ ಮುಂದುವರಿಯಬೇಕಿತ್ತು. ಈ ಸಂಬಂಧ ಆಲೋಚನೆಗೆ ಎರಡು ನಿಮಿಷ ಕಾಲಾವಕಾಶ ನೀಡಲಾಗಿತ್ತು.
2 ನಿಮಿಷದ ಬಳಿಕ, ‘ಗಿಲ್ಲಿ ನಿಮ್ಮ ನಿರ್ಧಾರ ತಿಳಿಸಿ’ ಅಂತ ಬಿಗ್ ಬಾಸ್ ಕೇಳಿದರು. ಆಗ ಗಿಲ್ಲಿ ಲೆಟರ್ ತೆಗೆದುಕೊಂಡು ಹೊರಗೆ ಬರುವುದಾಗಿ ಸ್ಪಷ್ಟಪಡಿಸಿದರು. ಇತ್ತ ಕಾವ್ಯಗೂ ಇದೇ ಪ್ರಶ್ನೆ ಮುಂದಿಡಲಾಯಿತು. ಆದರೆ, ಕಾವ್ಯ ಲೆಟರ್ ಹೊರ ತರುವುದಿಲ್ಲ ಎಂದು ತಿಳಿಸಿದರು. ಅಲ್ಲದೇ, ಗಿಲ್ಲಿ ಲೆಟರ್ ತಂದೇ ತರುತ್ತಾನೆಂಬ ಭರವಸೆಯನ್ನು ಕಾವ್ಯ ವ್ಯಕ್ತಪಡಿಸಿದರು. ಒಂದು ವೇಳೆ, ಕಾವ್ಯ ಲೆಟರ್ ತಂದರೆ ಹೇಗಪ್ಪ ಎಂಬ ಅಳುಕು ಗಿಲ್ಲಿಯಲ್ಲಿ ಇತ್ತು. ಕೊನೆಗೆ ಗಿಲ್ಲಿ ಮಾತ್ರ ಲೆಟರ್ ತಂದರು. ಗಿಲ್ಲಿಯನ್ನು ಕಾವ್ಯ ಎಷ್ಟು ಅರ್ಥ ಮಾಡಿಕೊಂಡಿದ್ದಾರೆಂಬುದು ಅನೇಕರಲ್ಲಿ ಅಚ್ಚರಿ ಮೂಡಿಸಿತು.
