ಉದಯವಾಹಿನಿ, ನವದೆಹಲಿ: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಮಾಜಿ ನಾಯಕ ಕೇನ್‌ ವಿಲಿಯಮ್ಸನ್‌ ಅವರು ವೆಸ್ಟ್‌ ಇಂಡೀಸ್‌ ವಿರುದ್ದದ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಮುಂದಿನ ಐಸಿಸಿ ಟೆಸ್ಟ್‌ ಚಾಂಪಿಯನ್‌ಷಿಪ್‌ 2025-27) ನಿಮಿತ್ತ ಟೆಸ್ಟ್‌ ಕ್ರಿಕೆಟ್‌ ಕಡೆಗೆ ಹೆಚ್ಚಿನ ಗಮನ ಹರಿಸಲು ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಮುಂದಿನ ತಿಂಗಳು ವೆಸ್ಟ್‌ ಇಂಡೀಸ್‌ ವಿರುದ್ಧ ಟೆಸ್ಟ್‌ ಸರಣಿ ಆರಂಭವಾಗಲಿದೆ. ನವೆಂಬರ್‌ 16 ರಂದು ಕ್ರೈಸ್ಟ್‌ ಚರ್ಚ್‌ನಲ್ಲಿ ಮೊದಲನೇ ಪಂದ್ಯದ ಮೂಲಕ ಏಕದಿನ ಸರಣಿ ಆರಂಭವಾಗಲಿದೆ. ಮಿಚೆಲ್‌ ಸ್ಯಾಂಟ್ನರ್‌ ಅವರು ಕಿವೀಸ್‌ ತಂಡವನ್ನು ಮುನ್ನಡೆಸಲಿದ್ದಾರೆ. ಇಂಗ್ಲೆಂಡ್‌ ವಿರುದ್ಧ 2-1 ಅಂತರದಲ್ಲಿ ಏಕದಿನ ಸರಣಿಯನ್ನು ಗೆದ್ದಿದ್ದ ಅನುಭವಿ ಹಾಗೂ ಯುವ ಆಟಗಾರರನ್ನು ಕೂಡ ಈ ಸರಣಿಗೂ ಪರಿಗಣಿಸಲಾಗಿದೆ.
ವೇಗದ ಬೌಲರ್‌ ಮ್ಯಾಟ್‌ ಹೆನ್ರಿ ಅವರು ನ್ಯೂಜಿಲೆಂಡ್‌ ತಂಡಕ್ಕೆ ಮರಳಿದ್ದಾರೆ. ಗಾಯದ ಕಾರಣ ಫಿನ್‌ ಆಲೆನ್‌ ಹಾಗೂ ಲಾಕಿ ಫರ್ಗ್ಯೂಸನ್‌ ಅವರು ವಿಂಡೀಸ್‌ ಏಕದಿನ ಸರಣಿಯ ಆಯ್ಕೆಗೆ ಅಲಭ್ಯರಾಗಿದ್ದಾರೆ. ವೆಸ್ಟ್‌ ಇಂಡೀಸ್‌ ಏಕದಿನ ಸರಣಿಗೆ ಆಯ್ಕೆ ಮಾಡಿರುವ ಸಂಯೋಜನೆಯ ಬಗ್ಗೆ ಹೆಡ್‌ ಕೋಚ್‌ ರಾಬ್‌ ವಾಲ್ಟರ್‌ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. “ಇಂಗ್ಲೆಂಡ್‌ ವಿರುದ್ದದ ಸರಣಿಯಲ್ಲಿ ನಾವು ಜಾಸ್ತಿ ಬಾಕ್ಸ್‌ಗಳನ್ನು ಟಿಕ್‌ ಮಾಡಿರಲಿಲ್ಲ. ಆದರೆ, ವಿಶ್ವದ ಅತ್ಯಂತ ಹೆಚ್ಚಿನ ವೇಗ ಹಾಗೂ ಬೌನ್ಸರ್‌ ಹೊಂದಿರುವ ಪಿಚ್‌ಗಳಲ್ಲಿ ನಮ್ಮ ಬ್ಯಾಟ್ಸ್‌ಮನ್‌ಗಳಿಗೆ ಕಠಿಣ ಸವಾಲು ಎದುರಾಗಲಿದೆ,” ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!