
ಉದಯವಾಹಿನಿ, ಇತ್ತೀಚಿನ ದಿನಗಳಲ್ಲಿ ಎಲ್ಲರೂ ಸಾಮಾನ್ಯವಾಗಿ ಎದುರಿಸುತ್ತಿರುವ ಸಮಸ್ಯೆ ಎಂದರೆ ಒತ್ತಡ ಆಧುನಿಕ ಜೀವನ ಶೈಲಿಯ) ಪರಿಣಾಮವೋ ಏನೋ ಸ್ಕೂಲ್ ಗೆ ಹೋಗೋ ಮಕ್ಕಳಿಂದ ಹಿಡಿದು ಪ್ರತಿಯೋರ್ವರು ಈ ಮಾನಸಿಕ ತೊಳಲಾಟದಿಂದ ಬಳಲುತ್ತಿದ್ದು, ಒತ್ತಡ, ಕಿರಿಕಿರಿ, ಆಯಾಸ ಮತ್ತು ಆತಂಕದ(Anxiety) ವಾತಾವರಣದಲ್ಲಿಯೇ ಜೀವನ ನಡೆಸುತ್ತಿದ್ದಾರೆ. ಅದರಲ್ಲೂ ಇಂದಿನ ಯುವಜನತೆಯಂತೂ ಸಣ್ಣಪುಟ್ಟ ವಿಷಯಗಳನ್ನು ಹೆಚ್ಚು ತಲೆಗೆ ತೆಗೆದುಕೊಳ್ಳುತ್ತಾರೆ. ಈ ಆತಂಕ ಹಾಗೂ ಒತ್ತಡದಲ್ಲಿ ಜೀವನ ನಡೆಸುವುದು ಅನಿವಾರ್ಯ ಅನ್ನುವ ಮಟ್ಟಿಗೆ ಮನಸ್ಥಿತಿ ಬದಲಾಗಿದೆ. ವೃತ್ತಿ ಹಾಗೂ ವೈಯಕ್ತಿಕ ಜೀವನವನ್ನು ಬೆರೆಸಿ ಎರಡನ್ನು ಬ್ಯಾಲೆನ್ಸ್ ಮಾಡಲಾಗದ ಪರಿಸ್ಥಿತಿಯಲ್ಲಿದ್ದೇವೆ.
ಅದರಲ್ಲೂ ವೃತ್ತಿ ಜೀವನದಲ್ಲಿ ಅತಿಯಾದ ಒತ್ತಡದಿಂದಾಗಿ ಕೆಲವರು ತಮ್ಮ ವೈಯಕ್ತಿಕ ಜೀವನವನ್ನೇ ಹಾಳು ಮಾಡಿಕೊಳ್ಳುವಂತಹ ಮಟ್ಟಕ್ಕೆ ಬಂದು ಬಿಡುತ್ತಾರೆ. ಈ ಅತಿಯಾದ ಒತ್ತಡ ಹಾಗೂ ಆತಂಕವು ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಅತಿಯಾದ ಒತ್ತಡದಿಂದ ಖಿನ್ನತೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಆದ್ದರಿಂದ ಇದನ್ನು ಪರಿಣಾಮಕಾರಿಯಾಗಿ ನಿಭಾಯಿಸುವುದು ಅತ್ಯಗತ್ಯ. ಇಲ್ಲವಾದಲ್ಲಿ ಒತ್ತಡವು ಹೀಗೆ ಮುಂದುವರಿದರೆ ಅದರಿಂದ ಜೀವಿತಾವಧಿ ಮೇಲೆ ಕೂಡ ಪರಿಣಾಮ ಬೀರುತ್ತದೆ. ಜೊತೆಗೆ ಡಿಪ್ರೆಶನ್ ಗೆ ಒಳಗಾಗುವ ಸಾಧ್ಯತೆಯೂ ಹೆಚ್ಚಿರುತ್ತದೆ. ಇದಕ್ಕಾಗಿ ಔಷಧಿ ಹಾಗೂ ಮಾತ್ರೆಗಳನ್ನು ಸೇವಿಸುವಂತಹ ಪರಿಸ್ಥಿತಿಯು ಬರಬಹುದು. ಇದು ಖಿನ್ನತೆ ಕಡಿಮೆ ಮಾಡಬಹುದಾದರೂ ಬೇರೆ ರೀತಿಯಲ್ಲಿ ಅಡ್ಡ ಪರಿಣಾಮ ಬೀರಬಹುದು.
