ಉದಯವಾಹಿನಿ, ಹಾಸನ: ಬೇಲೂರು ತಾಲೂಕಿನ ಬಿಕ್ಕೋಡು ಗ್ರಾಮದಲ್ಲಿ ಒಂಟಿ ಸಲಗವೊಂದು ವಾಹನಗಳ ನಡುವೆ ಹಾಗೂ ಜನರ ಸಮೀಪದಲ್ಲೇ ಯಾರಿಗೂ ತೊಂದರೆ ಕೊಡದೆ ಸಾಕಾನೆಯಂತೆ ಓಡಾಡಿದೆ. ಗ್ರಾಮದೊಳಗೆ ಎಂಟ್ರಿ ಕೊಟ್ಟ ಭೀಮನನ್ನು ಇಟಿಎಫ್ ಸಿಬ್ಬಂದಿ ಮೈಕ್‍ನಲ್ಲಿ ಅನೌನ್ಸ್ ಮಾಡುತ್ತ ಎಸ್ಕಾರ್ಟ್ ಮಾಡಿದ್ದಾರೆ. ಈ ವೇಳೆ ಕಾಡಾನೆ ಸಾಕಾನೆಯಂತೆಯೇ ಯಾವುದೇ ಗೊಂದಲಕ್ಕೊಳಗಾಗದೇ ಹೆಜ್ಜೆ ಹಾಕಿದೆ. ಸುತ್ತಮುತ್ತ ಜನರು ಇರುವುದನ್ನು ಕಂಡು, ಸೊಂಡಿಲಿನಲ್ಲಿ ತನ್ನದೇ ಶೈಲಿಯಲ್ಲಿ ಸನ್ನೆ ಮಾಡಿ ಪೋಸ್ ಕೊಡುತ್ತಾ, ಜನರತ್ತ ನೋಡಿ ಕಾಡಿನ ಕಡೆ ಹೆಜ್ಜೆ ಹಾಕಿದೆ. ಇಟಿಎಫ್ ಸಿಬ್ಬಂದಿ ಎಸ್ಕಾರ್ಟ್ ಮಾಡುವ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಜನರನ್ನು ಕಂಡು ಸೊಂಡಲು ಎತ್ತಿ ಸಾಗುತ್ತಿರುವುದು ಸಹ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
