ಉದಯವಾಹಿನಿ, ಚೆನ್ನೈ : ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ನಟ ದಳಪತಿ ವಿಜಯ್ ತಮಿಳಗ ವೆಟ್ರಿ ಕಳಗಂ ಪಕ್ಷ ಹುಟ್ಟು ಹಾಕಿ ಬಿರುಸಿನ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಈ ರಾಜಕೀಯ ಹಾದಿ ಉದ್ದಕ್ಕೂ ಅನೇಕ ವಿಘ್ನಗಳನ್ನು ಎದುರಿಸುತಲ್ಲೇ ಬರುತ್ತಿದ್ದಾರೆ. ಆರಂಭದಿಂದಲೂ ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಲೇ ಬಂದಿರುವ ವಿಜಯ್ ಇದೀಗ ಸ್ವಪಕ್ಷೀಯರ ಅಸಮಾಧಾನಕ್ಕೆ ತುತ್ತಾಗಿದ್ದಾರೆ. ಚೆನ್ನೈಗೆ ಆಗಮಿಸಿದ ವಿಜಯ್ ಅವರ ಕಾರನ್ನು ತಡೆದು ನಿಲ್ಲಿಸಿ ಟಿವಿಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾವಾರು ಹುದ್ದೆಗಳನ್ನು ಸರಿಯಾಗಿ ಹಂಚಿಕೆ ಮಾಡಿಲ್ಲ ಎಂದು ಆರೋಪಿಸಿ ತಡೆ ಒಡ್ಡಿದ್ದಾರೆ. ಟಿವಿಕೆಯ ಕೇಂದ್ರ ಕಚೇರಿ ಇರುವ ಚೆನ್ನೈಯ ಪನೈಯೂರ್‌ಗೆ ಆಗಮಿಸಿದ ವಿಜಯ್ ಅವರ ಕಾರನ್ನು ಕಾರ್ಯಕರ್ತರು ತಡೆದು ನಿಲ್ಲಿಸಿ ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೊ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತೂತುಕ್ಕಡಿಯ ಅಜಿತಾ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಸಲಾಯಿತು ಎಂದು ವರದಿಯೊಂದು ತಿಳಿಸಿದೆ. ಜಿಲ್ಲಾವಾರು ಹುದ್ದೆಗಳ ಹಂಚಿಕೆಯಲ್ಲಿ ತಾರತಮ್ಯ ಎಸಗಲಾಗಿದೆ ಎಂದು ದೂರಿದ್ದಾಗಿ ಮೂಲಗಳು ತಿಳಿಸಿವೆ.
