ಉದಯವಾಹಿನಿ, ಸೂರತ್‌: ಬೀದಿ ನಾಯಿಗಳ ಗುಂಪೊಂದು ಬೆನ್ನಟ್ಟಿದ ಪರಿಣಾಮ 38 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟ ದಾರುಣ ಘಟನೆ ಗುಜರಾತ್‌ನ ಸೂರತ್‌ನಲ್ಲಿ ನಡೆದಿದೆ. ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ವೈರಲ್ ಆಗಿದೆ. ನಾಯಿಗಳು ಬೆನ್ನಟ್ಟಿದಾಗ ಓಟಕ್ಕಿತ್ತ ಅವರು ಎಡವಿಬಿದ್ದು ತೀವ್ರ ಗಾಯಗೊಂಡಿದ್ದರ ಪರಿಣಾಮ ಮೃತಪಟ್ಟಿದ್ದಾರೆ.
ಇಬ್ರಾಹಿಂ ಅಲಿಯಾಸ್ ಎಜಾಜ್ ಅಹ್ಮದ್ ಅನ್ಸಾರಿ ಮೃತ ದುರ್ದೈವಿ. ಅಕ್ಟೋಬರ್ 24ರಂದು ಸೂರತ್‌ನ ಸಯ್ಯದ್‌ಪುರ ಪ್ರದೇಶದ ಭಂಡಾರಿವಾಡ್‌ನಲ್ಲಿ ಈ ಘಟನೆ ನಡೆದಿತ್ತು. ಇಬ್ರಾಹಿಂ ಬೆಳಗ್ಗಿನ ಪ್ರಾರ್ಥನೆ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ, ಆರರಿಂದ ಏಳು ಬೀದಿ ನಾಯಿಗಳ ಗುಂಪು ಅವರನ್ನು ಆಕ್ರಮಣಕಾರಿಯಾಗಿ ಬೆನ್ನಟ್ಟಲು ಪ್ರಾರಂಭಿಸಿತು.
ಬೀದಿನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ, ಅವರು ಒಂದೇಸಮನೆ ಓಟಕ್ಕಿತ್ತರು. ಪರಿಣಾಮ, ಎಡವಿ ರಸ್ತೆಗೆ ಬಿದ್ದಿದ್ದಾರೆ. ಬಿದ್ದ ತೀವ್ರತೆಗೆ ಅವರ ಬೆನ್ನುಮೂಳೆಯ ಪ್ರಮುಖ ನರವು ಹಾನಿಗೊಳಗಾಗಿ ಮೆದುಳಿನಲ್ಲಿ ರಕ್ತಸ್ರಾವ ಮತ್ತು ಪಾರ್ಶ್ವವಾಯು ಉಂಟಾಯಿತು. ಆಸ್ಪತ್ರೆಯಲ್ಲಿ ದಿನಗಳ ಕಾಲ ಚಿಕಿತ್ಸೆ ನೀಡಲಾಗಿದ್ದರೂ, ಘಟನೆಯ ಕೆಲವು ದಿನಗಳ ನಂತರ ಅವರು ಮೃತಪಟ್ಟರು. SMC ಪೋರ್ಟಲ್‌ನಲ್ಲಿ ಅಥವಾ ಸಿವಿಲ್ ಆಸ್ಪತ್ರೆ ಮತ್ತು ಆಸ್ಪತ್ರೆಯಲ್ಲಿನ ದೂರುಗಳ ಸಂಖ್ಯೆಯನ್ನು ನೋಡಿದರೆ, ಈ ಬೀದಿನಾಯಿಗಳು ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರು ಮತ್ತು ಹಿರಿಯ ನಾಗರಿಕರವರೆಗೆ ಎಲ್ಲರ ಮೇಲೆ ದಾಳಿ ಮಾಡುತ್ತಿವೆ, ಕೆಲವರು ಜೀವ ಕಳೆದುಕೊಂಡಿದ್ದಾರೆ. ಇದಕ್ಕೆ ಕಡಿವಾಣ ಹಾಕುವವರು ಯಾರು ಎಂದು ಮೃತರ ಕುಟುಂಬ ಸದಸ್ಯರು ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!