ಉದಯವಾಹಿನಿ, ತಮ್ಮ ಸುಂಕ ನೀತಿಯನ್ನು ಸಮರ್ಥಿಸಿಕೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ನೀತಿಯನ್ನು ವಿರೋಧಿಸುವವರು “ಮೂರ್ಖರು” ಎಂದಿದ್ದಾರೆ.
ಸಾಮಾಜಿಕ ಮಾಧ್ಯಮ ಟ್ರೂತ್​ನಲ್ಲಿ ಭಾನುವಾರ ಪೋಸ್ಟ್ ಹಂಚಿಕೊಂಡಿರುವ ಅವರು, ಅಮೆರಿಕ ವಿಶ್ವದ ಅತ್ಯಂತ ಶ್ರೀಮಂತ, ಗೌರವಾನ್ವಿತ ದೇಶ. ಹಣದುಬ್ಬರವಿಲ್ಲ ಮತ್ತು ದಾಖಲೆಯ ಷೇರು ಮಾರುಕಟ್ಟೆ ಬೆಲೆಯನ್ನು ಹೊಂದಿದೆ. ಸುಂಕಗಳಿಂದ ಅಮೆರಿಕ ಟ್ರಿಲಿಯಲ್​​ ಡಾಲರ್​ಗಟ್ಟಲೆ ಆದಾಯ ಪಡೆಯುತ್ತಿದೆ. ಇದು 37 ಟ್ರಿಲಿಯನ್ ಡಾಲರ್​ ಸಾಲವನ್ನು ಶೀಘ್ರದಲ್ಲೇ ಮರು ಪಾವತಿಸಲು ನಮಗೆ ಅನುವು ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ.
ದೇಶಕ್ಕೆ ದಾಖಲೆಯ ಪ್ರಮಾಣದಲ್ಲಿ ಹೂಡಿಕೆಗಳು ಹರಿದು ಬರುತ್ತಿವೆ, ಸ್ಥಾವರಗಳು ಮತ್ತು ಕಾರ್ಖಾನೆಗಳು ಎಲ್ಲೆಡೆ ತಲೆ ಎತ್ತುತ್ತಿವೆ. ಹೆಚ್ಚಿನ ಆದಾಯ ಹೊಂದಿರುವ ಜನರನ್ನು ಹೊರತುಪಡಿಸಿ ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಕನಿಷ್ಠ 2 ಸಾವಿರ ಡಾಲರ್​ (1.77 ಲಕ್ಷ ರೂ) ಲಾಭಾಂಶ ನೀಡುವುದಾಗಿ ಟ್ರಂಪ್ ಭರವಸೆ ನೀಡಿದ್ದಾರೆ. ಆದರೆ ಈ ಕುರಿತು ಹೆಚ್ಚಿನ ವಿವರ ನೀಡಿಲ್ಲ.ಟ್ರಂಪ್ ಅಧ್ಯಕ್ಷತೆಯಲ್ಲಿ ವಿಧಿಸಲಾದ ಜಾಗತಿಕ ಸುಂಕಗಳ ಕುರಿತು ನವೆಂಬರ್ 6ರಂದು ಯುಎಸ್ ಸುಪ್ರೀಂ ಕೋರ್ಟ್ ವಿಚಾರಣೆ ಆರಂಭಿಸಿದ ಕೆಲ ದಿನಗಳ ನಂತರ ಟ್ರಂಪ್​ ಈ ಹೇಳಿಕೆ ನೀಡಿದ್ದು, ಇದು ಟ್ರಂಪ್​ ಸಮರ್ಥಿಸುತ್ತಿರುವ ನೀತಿಗಳ ಕಾನೂನು ಮಾನ್ಯತೆಯ ಪರಿಶೀಲನೆಯನ್ನು ಎತ್ತಿ ತೋರಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ಸುಪ್ರೀಂ ಕೋರ್ಟ್ ತಲುಪಿದ ಅತ್ಯಂತ ಮಹತ್ವದ ಆರ್ಥಿಕ ಪ್ರಕರಣಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!