
ಉದಯವಾಹಿನಿ, ನವದೆಹಲಿ: ದೆಹಲಿಯಲ್ಲಿ 12 ಮಂದಿಯ ಸಾವಿಗೆ ಕಾರಣವಾದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳಿಂದ ಸ್ಫೋಟಕ ಅಂಶಗಳು ಬೆಳಕಿಗೆ ಬರುತ್ತಿವೆ.
ಹೌದು.. ಅತ್ತ ಹರ್ಯಾಣದ ಫರೀದಾಬಾದ್ ನಲ್ಲಿ 3 ಸಾವಿರ ಕೆಜಿ ಸ್ಫೋಟಕ ಪತ್ತೆ ಬೆನ್ನಲ್ಲೇ ಇತ್ತ ರಾಜಧಾನಿ ದೆಹಲಿಯಲ್ಲಿ ಆತ್ಮಹತ್ಯಾ ದಾಳಿ ಸಂಭವಿಸಿದೆ. ಈ ಭೀಕರ ಸ್ಫೋಟದಲ್ಲಿ ಕನಿಷ್ಠ 12 ಮಂದಿ ಸಾವಿಗೀಡಾಗಿ 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಪ್ರಕರಣದಲ್ಲಿ ಪ್ರಮುಖ ವೈದ್ಯಕೀಯ ಶಿಕ್ಷಣ ಸಂಸ್ಛೆಯ ನುರಿತ ವೈದ್ಯರೇ ಆತ್ಮಹತ್ಯಾ ಬಾಂಬರ್ ಗಳಾಗಿ ಮಾರ್ಪಟ್ಟಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಇನ್ನುಈ ದೆಹಲಿ ಸ್ಫೋಟಕ್ಕೂ ಮುನ್ನ ಹರ್ಯಾಣದ ಫರೀದಾಬಾದ್ ನಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ್ದ ಅಧಿಕಾರಿಗಳು ಬಾಡಿಗೆ ಮನೆಯಲ್ಲಿ ಶೇಖರಿಸಿಟ್ಟಿದ್ದ ಬರೊಬ್ಬರಿ 3 ಸಾವಿರ ಕೆಜಿ ಸ್ಫೋಟಕಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಪೈಕಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹರಿಯಾಣದ ಫರಿದಾಬಾದ್‌ನಿಂದ ಐಇಡಿ ತಯಾರಿಸುವ ವಸ್ತು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಡಾ. ಮುಜಮ್ಮಿಲ್ ನನ್ನು ಬಂಧಿಸಿದ್ದ ಪೊಲೀಸರು 360 ಕೆಜಿ ಸ್ಫೋಟಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ಇದಲ್ಲದೆ, ಪಿಸ್ತೂಲ್‌ಗಳು, ಲೈವ್ ಕಾರ್ಟ್ರಿಡ್ಜ್‌ಗಳು, ಟೈಮರ್‌ಗಳು, ಬ್ಯಾಟರಿಗಳು, ವಾಕಿ-ಟಾಕಿ ಸೆಟ್‌ಗಳು, ಹೆವಿ ಮೆಟಲ್ ಮತ್ತು ಸೇರಿ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
