ಉದಯವಾಹಿನಿ, ಇಸ್ಲಾಮಾಬಾದ್: ಇಲ್ಲಿನ ಕೋರ್ಟ್‌ ಸಂಕೀರ್ಣದಲ್ಲಿ ಸ್ಫೋಟ ಸಂಭವಿಸಿದ್ದು, 12 ಮಂದಿ ಸಾವನ್ನಪ್ಪಿದ್ದಾರೆ. 27 ಮಂದಿ ಗಾಯಗೊಂಡಿದ್ದಾರೆ. ಇದು ಆತ್ಮಾಹುತಿ ದಾಳಿ ಎಂದು ವರದಿಯಾಗಿದೆ. ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಅವರು, ಆತ್ಮಾಹುತಿ ಬಾಂಬ್ ದಾಳಿ ಮಧ್ಯಾಹ್ನ 12:39 ಕ್ಕೆ ನಡೆದಿದೆ. ಬಾಂಬರ್ ನ್ಯಾಯಾಲಯ ಸಂಕೀರ್ಣ ಪ್ರವೇಶಿಸಲು ಪ್ರಯತ್ನಿಸಿದ್ದ. ಆದರೆ, 10 ರಿಂದ 15 ನಿಮಿಷಗಳ ಕಾಲ ಅಲ್ಲಿಯೇ ಕಾದ ನಂತರ ಹೊರಗೆ, ಪೊಲೀಸ್ ವಾಹನದ ಬಳಿ ಸಾಧನವನ್ನು ಸ್ಫೋಟಿಸಿದ್ದಾನೆಂದು ತಿಳಿಸಿದ್ದಾರೆ.
ಅದು ಕಾರ್ ಬಾಂಬ್ ಎಂದು ಪಾಕಿಸ್ತಾನಿ ಅಧಿಕಾರಿಗಳು ತಿಳಿಸಿದ್ದಾರೆ. ಕೆಲವು ಕಿಲೋಮೀಟರ್ ದೂರದಲ್ಲಿ ಕೇಳಿಬಂದ ಈ ಸ್ಫೋಟದ ಶಬ್ದವು ನ್ಯಾಯಾಲಯದ ಹೊರಗೆ ಹಲವಾರು ವಾಹನಗಳಿಗೆ ಹಾನಿಯನ್ನುಂಟು ಮಾಡಿತು. ಜನದಟ್ಟಣೆಯಿಂದ ಕೂಡಿದ್ದ ಸಮಯದಲ್ಲಿ ಈ ದಾಳಿ ನಡೆದಿದೆ. ಯಾವುದೇ ಗುಂಪು ತಕ್ಷಣಕ್ಕೆ ಹೊಣೆ ಹೊತ್ತಿಲ್ಲ. ದೇಶಾದ್ಯಂತ ಉಗ್ರಗಾಮಿ ದಾಳಿಗಳು ಮತ್ತು ಪಾಕಿಸ್ತಾನಿ ತಾಲಿಬಾನ್ ಮತ್ತೆ ಸಕ್ರಿಯವಾಗುತ್ತಿರುವುದು ಪಾಕಿಸ್ತಾನಕ್ಕೆ ತಲೆನೋವಾಗಿದೆ.
ವಾಯುವ್ಯ ಪ್ರಾಂತ್ಯದ ಸೇನಾ ಸ್ವಾಮ್ಯದ ಕಾಲೇಜಿನಲ್ಲಿ ಆತ್ಮಾಹುತಿ ಕಾರ್ ಬಾಂಬರ್ ಮತ್ತು ಇತರ ಐದು ಪಾಕಿಸ್ತಾನಿ ತಾಲಿಬಾನ್ ಉಗ್ರರು ರಾತ್ರಿಯಿಡೀ ಕೆಡೆಟ್‌ಗಳನ್ನು ಒತ್ತೆಯಾಳುಗಳಾಗಿ ಇಟ್ಟುಕೊಳ್ಳಲು ಪ್ರಯತ್ನಿಸಿದ್ದರು. ಅದನ್ನು ನಾವು ವಿಫಲಗೊಳಿಸಿದ್ದೇವೆ ಎಂದು ಪಾಕಿಸ್ತಾನಿ ಭದ್ರತಾ ಪಡೆಗಳು ತಿಳಿಸಿವೆ.

ಇತ್ತೀಚಿನ ತಿಂಗಳುಗಳಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ಅ.9 ರಂದು ಅಫ್ಘಾನ್ ರಾಜಧಾನಿಯಲ್ಲಿ ಹಲವಾರು ಜನರು ಸಾವಿಗೆ ಕಾರಣವಾಗಿದ್ದ ಡ್ರೋನ್ ದಾಳಿಗೆ ಕಾಬೂಲ್ ಇಸ್ಲಾಮಾಬಾದ್ ಅನ್ನು ದೂಷಿಸಿತು. ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿತು. ನಂತರದ ಗಡಿಯಾಚೆಗಿನ ಹೋರಾಟದಲ್ಲಿ ಹತ್ತಾರು ಸೈನಿಕರು, ನಾಗರಿಕರು ಮತ್ತು ಉಗ್ರಗಾಮಿಗಳು ಸಾವನ್ನಪ್ಪಿದರು.

Leave a Reply

Your email address will not be published. Required fields are marked *

error: Content is protected !!