ಉದಯವಾಹಿನಿ,ನವದೆಹಲಿ:  ಆಫ್ರಿಕಾದ ಕೆಲ ದೇಶಗಳಲ್ಲಿ ಹಲವು ಮಂದಿಯ ಸಾವಿಗೆ ಭಾರತದ ಕೆಮ್ಮಿನ ಸಿರಪ್​ಗಳು ಕಾರಣ ಎಂಬಂತಹ ವರದಿ ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರ ಎಚ್ಚೆತ್ತುಕೊಂಡಿದೆ. ಭಾರತ ಈ ವಿಶ್ವದ ಫಾರ್ಮಸಿಯಾಗಬೇಕೆನ್ನುವ ಅಭಿಲಾಷೆಗೆ ಈ ಬೆಳವಣಿಗೆ ಘಾಸಿ ತರುತ್ತಿದ್ದು, ಅದನ್ನು ಸರಿಮಾಡಲು ಸರ್ಕಾರ ಗಂಭೀರವಾಗಿದೆ. ಕಳಪೆ ಔಷಧ ತಯಾರಿಕೆಯನ್ನು ನಿಯಂತ್ರಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ದೇಶದಲ್ಲಿ ಗುಣಮಟ್ಟದ ಔಷಧ ತಯಾರಾಗುತ್ತಿರುವುದನ್ನು ಖಚಿತಪಡಿಸಿಕೊಳ್ಳಲು ಫಾರ್ಮಾ ಕ್ಷೇತ್ರದ ಪ್ರಾಧಿಕಾರಗಳಿಂದ ವ್ಯಾಪಕ ಪರಿಶೀಲನೆ ನಡೆಸಲಾಗುತ್ತಿದೆ. ಅನುಮಾನ ಬಂದ ಫಾರ್ಮಾ ಘಟಕಗಳನ್ನು ಆಯ್ದುಕೊಂಡು ತಪಾಸಣೆ ಕಾರ್ಯ ನಡೆಸಲಾಗುತ್ತಿದೆ. ಕೇಂದ್ರ ಆರೋಗ್ಯ ಸಚಿವ ಡಾ. ಮನಸುಖ್ ಮಾಂಡವೀಯ ಇಂದು ನೀಡಿರುವ ಮಾಹಿತಿ ಪ್ರಕಾರ ಈವರೆಗೆ 137 ಸಂಸ್ಥೆಗಳನ್ನು ತಪಾಸಿಸಲಾಗಿದೆ. ಇದರಲ್ಲಿ 105 ಸಂಸ್ಥೆಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಈ 105 ಸಂಸ್ಥೆಗಳ ಪೈಕಿ 31ರಲ್ಲಿ ಉತ್ಪಾದನೆ ನಿಲ್ಲಿಸಲಾಗಿದೆ. 50 ಸಂಸ್ಥೆಗಳಿಗೆ ಪರವಾನಿಗೆ ರದ್ದು ಮಾಡಲಾಗಿದೆ. 73 ಸಂಸ್ಥೆಗಳಿಗೆ ಶೋಕಾಸ್ ನೋಟೀಸ್ ಕೊಡಲಾಗಿದೆ. 21 ಸಂಸ್ಥೆಗಳಿಗೆ ಎಚ್ಚರಿಕೆಯ ಪತ್ರ ಕಳುಹಿಸಲಾಗಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಮನಸುಖ್ ಮಾಂಡವೀಯ ಮಂಗಳವಾರದಂದು ಎಂಎಸ್​ಎಂಇ ವಲಯದ ಫಾರ್ಮಾ ಕಂಪನಿಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸುತ್ತಾ, ಔಷಧ ಉತ್ಪಾದನೆಯಲ್ಲಿ ಗುಣಮಟ್ಟ ಖಾತ್ರಿಪಡಿಸುವಂತೆ ಕರೆ ನೀಡಿದರು. ಫಾರ್ಮಾ ಕಂಪನಿಗಳು ಸ್ವಯಂ ಕಟ್ಟಳೆ ಮೂಲಕ ಉತ್ತಮ ಉತ್ಪಾದನಾ ಪ್ರಕ್ರಿಯೆ (ಜಿಎಂಪಿ) ಅಳವಡಿಸಿಕೊಳ್ಳಬೇಕು ಎಂದೂ ಕರೆ ನೀಡಿದರು. ‘ಫಾರ್ಮಾ ವಲಯದಲ್ಲಿ ನಮ್ಮ ಜಾಗತಿಕ ಸ್ಥಾನಮಾನವು ನಮ್ಮ ಉತ್ಪನ್ನಗಳ ಗುಣಮಟ್ಟದ ಮೇಲೆ ಸಿದ್ಧವಾಗುತ್ತದೆ. ಔಷಧದ ಗುಣಮಟ್ಟ ಮತ್ತು ಮೌಲ್ಯದ ವಿಚಾರದಲ್ಲಿ ಭಾರತದ ಸ್ಥಾನಮಾನ ಗಟ್ಟಿಗೊಳಿಸಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ನಾನು ತೆಗೆದುಕೊಳ್ಳಬೇಕು. ಆದ್ದರಿಂದ ಸೆಲ್ಫ್ ರೆಗ್ಯುಲೇಶನ್ ಬಹಳ ಮುಖ್ಯವಾಗುತ್ತದೆ’ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರೂ ಆದ ಮಾಂಡವೀಯ ಹೇಳಿದರು.

Leave a Reply

Your email address will not be published. Required fields are marked *

error: Content is protected !!