ಉದಯವಾಹಿನಿ,ಬೆಂಗಳೂರು: ಕನ್ನಡ ಸಂಘದ ಹೆಮ್ಮೆಯ ಪತ್ರಿಕೆ ಸಿಂಗಾರ ಪತ್ರಿಕೆ -2023. ಸಂಪೂರ್ಣ ಡಿಜಿಟಲ್ ಪ್ರತಿಯನ್ನು ನಿಮ್ಮ ಮುಂದಿಡಲು ಸಂಘವು ಆಶಿಸುತ್ತದೆ. ವಿಶೇಷಾಂಕವಾಗಿ ಹೊರ ಹೊಮ್ಮುವ ಪ್ರತೀ ಸಿಂಗಾರ ಪತ್ರಿಕೆ ವಿಶೇಷವೇ ಸರಿ. ಪ್ರತೀ ಎರಡು ವರ್ಷಗಳಿಗೊಮ್ಮೆ ಹೊರ ಹೊಮ್ಮುವ ಪತ್ರಿಕೆಯ ಹಿಂದೆ ಅನೇಕ ಕನ್ನಡ ಮನಗಳ ಸೇವೆ ಒಳಗೊಂಡಿದೆ. ಸಿಂಗನ್ನಡಿಗರಿಗೆ ಸಿಂಗಾರ ಪತ್ರಿಕೆ ಎನ್ನುವುದು ಕೇವಲ ಪತ್ರಿಕೆಯಾಗಿರದೆ ಹಲವಾರು ವರ್ಷಗಳ ನೆನಪಿನ ಕಣಜವೇ ಸರಿ. ಅನೇಕರಿಗೆ ನೆನಪುಗಳ ಮೆಲುಕು ಹಾಕುವ ಪುಸ್ತಕವಾದರೆ, ಹೊಸಬರಿಗೆ ನೆನಪುಗಳ ಬುತ್ತಿಯನ್ನು ಕಟ್ಟಿಕೊಳ್ಳುವ ಅವಕಾಶದ ಗಣಿ. ಇದೊಂದು ಸಂಘದ ಜೊತೆಗಿನ ನಂಟಿನ ಒಂದು ಭಾವನಾತ್ಮಕ ಕೊಂಡಿ. ಸಾಹಿತ್ಯವೆಂಬುವುದು ಭಾಷೆಯ ಶ್ರೀಮಂತಿಕೆಯನ್ನು ಎತ್ತಿ ತೋರುವ ಸಾಧನ. ಸಂಘದ ಮುಖ್ಯ ಉದ್ದೇಶಗಳಲ್ಲಿ ಸಾಹಿತ್ಯಕ್ಕೆ ಪೂರಕವಾದಂತಹ ಚಟುವಟಿಕೆಗಳನ್ನು ಪ್ರೋತ್ಸಾಹಿಸಿ ಭಾಷೆಯ ಮೂಲಕ ನಾಡಿನ ಪರಂಪರೆಯನ್ನು ಆಚರಿಸಿ, ಸಂಭ್ರಮಿಸುವುದಾಗಿದೆ. ಸಿಂಗನ್ನಡಿಗರ ಸಾಹಿತ್ಯಪರ ಆಸಕ್ತಿಯನ್ನು ಪ್ರೋತ್ಸಾಹಿಸಲು ಸಂಘವು ಸಾಹಿತ್ಯ ಸ್ಪರ್ಧೆಗಳನ್ನು ಪ್ರತೀ ವರ್ಷ ನಡೆಸುತ್ತಾ ಬಂದಿದೆ.
ಮಕ್ಕಳು ತಮ್ಮ ಕವನ, ಕಥೆ ಹಾಗು ಪ್ರಬಂಧಗಳನ್ನು ಇಂಗ್ಲಿಷ್‌ನಲ್ಲಿ ಬರೆಯುವ ಅವಕಾಶವನ್ನು ಕೂಡ ಕಲ್ಪಿಸಿಕೊಡಲಾಗಿದೆ. ಈ ಸ್ಪರ್ಧೆಗಳಲ್ಲಿ ಬಹುಮಾನ ಪಡೆದ ಬರಹಗಳನ್ನು ಪತ್ರಿಕೆಯಲ್ಲಿ ಪ್ರಕಟಿಸುವುದು ವಾಡಿಕೆ. ಅದೇ ರೀತಿಯಲ್ಲಿ ಸಿಂಗಾರ ಪತ್ರಿಕೆಗೆಂದೇ ಆಹ್ವಾನಿಸಿದ ಲೇಖನಗಳನ್ನು ಸ್ವೀಕರಿಸಿ ಪತ್ರಿಕೆಯಲ್ಲಿ ಸೇರ್ಪಡಿಸಲಾಗುವುದು. ಅದಷ್ಟೇ ಅಲ್ಲದೆ ಪ್ರತೀ ಎರಡು ವರ್ಷಕ್ಕೊಂದು ಬದಲಾಗುವ ಸಂಘದ ಕಾರ್ಯಕಾರೀ ಸಮಿತಿಯ ಕಾರ್ಯಕ್ರಮಗಳ ವಿವರಗಳು, ಫೋಟೋಗಳನ್ನು ಒಂದೆಡೆ ಸೇರಿಸಿ ನೆನಪಿನ ಬುತ್ತಿಯಂತೆ ಪತ್ರಿಕೆಯಲ್ಲಿ ದಾಖಲಿಸುವುದು ಕೂಡ ಪತ್ರಿಕೆಯ ವಿಶೇಷ. ಹೊಸತನವೊಂದು ಮೈದಳೆದಿದೆ ಎನ್ನುವಂತೆ, 2021-2023ರ ಸಾಲಿನ “ಸಿಂಗಾರ ಪತ್ರಿಕೆ” ಸಂಘದ 15ನೇ ಸಂಚಿಕೆ, ಸಂಪೂರ್ಣ ಡಿಜಿಟಲ್ ರೂಪವನ್ನ್ಹೊತ್ತು ಮೂಡಿ ಬಂದಿರುವುದು ಶ್ಲಾಘನೀಯ. ಈ ಡಿಜಿಟಲ್ ಯುಗದಲ್ಲಿ ತಾಂತ್ರಿಕವಾಗಿ ಅನೇಕ ಸವಾಲುಗಳನ್ನು ಎದುರಿಸಿ, ಅನೇಕ ಹೊಸ ವಿಷಯಗಳನ್ನು ಕಲಿತು ಸಾಕಾರಗೊಳಿಸುವ ಪ್ರಯತ್ನದಡಿಯಲ್ಲಿ ಈ ಬಾರಿಯ ಸಿಂಗಾರ ಪತ್ರಿಕೆಯು ಕೂಡ ಹೊರತಾಗದೇ ತನ್ನನ್ನು ತಾನೇ ಅರ್ಪಿಸಿಕೊಂಡಿದೆ. ನೈಸರ್ಗಿಕ ಸಂಪನ್ಮೂಲಗಳಲ್ಲಿ ಕಾಗದದ ಉಪಯೋಗ ಅತ್ಯಂತ ಪ್ರಮುಖ ಪಾತ್ರವಾಗಿದೆ ಎನ್ನುವುದು ನಿಸ್ಸಂದೇಹ, ನಿರ್ವಿವಾದದ ವಿಷಯ. ಅದಷ್ಟೇ ಅಲ್ಲದೆ, ಸಂಘದ ಸಂಪನ್ಮೂಲಗಳನ್ನು ಸಹ ಗಮನದಲ್ಲಿಟ್ಟುಕೊಂಡು ಈ ಬಾರಿ ಸಂಪೂರ್ಣ ಡಿಜಿಟಲ್ ಪತ್ರಿಕೆಯಾಗಿಸುವ ಸಂಘದ ಪ್ರಯತ್ನ ಯಶಸ್ವಿಯಾಗಿ ತನ್ನ ಸಾರ್ಥಕತೆಯನ್ನು ತೋರಿದೆ.
