ಉದಯವಾಹಿನಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳ ಪಾಲಿಗೆ ಬೇಸರದ ಸುದ್ದಿಯೊಂದು ಹೊರಬಿದ್ದಿದೆ. ಆರ್‌ಸಿಬಿ ಕಪ್ ಗೆಲುವಿನ ಸಂಭ್ರಮಾಚರಣೆ ವೇಳೆ ಭೀಕರ ಕಾಲ್ತುಳಿತಕ್ಕೆ ಸಾಕ್ಷಿಯಾಗಿದ್ದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇನ್ನು ಮುಂದೆ ಐಪಿಎಲ್ ಪಂದ್ಯಗಳೇನಡೆಯುವುದು ಅನುಮಾನ ಎನ್ನಲಾಗುತ್ತಿದೆ.
ಕಾಲ್ತುಳಿತದ ಬಳಿಕ ನ್ಯಾ.ಮೈಕೆಲ್ ಕುನ್ಹಾ ಆಯೋಗವು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ವರದಿಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೆಚ್ಚಿನ ಜನರು ಸೇರುವ ಪಂದ್ಯಗಳನ್ನು ಆಯೋಜಿಸುವುದು ಸೂಕ್ತವಲ್ಲ ಎಂದು ಉಲ್ಲೇಖಿಸಿತ್ತು. ಇದರ ಬಳಿಕ ಚಿನ್ನಸ್ವಾಮಿಯಲ್ಲಿ ಯಾವುದೇ ದೇಶಿಯ ಮತ್ತು ಅಂತಾರಾಷ್ಟ್ರೀಯ ಪಂದ್ಯಗಳು ನಡೆಯುತ್ತಿಲ್ಲ. ನಿಗದಿಯಾ ಮಹಿಳಾ ವಿಶ್ವಕಪ್‌ನ ಉದ್ಘಾಟನಾ ಪಂದ್ಯ, ಸೆಮಿಫೈನಲ್, ಫೈನಲ್ ಪಂದ್ಯವನ್ನೂ ಕೂಡ ಬೇರೆಡೆಗೆ ಸ್ಥಳಾಂತರಿಸಲಾಗಿತ್ತು.
ಇದರಿಂದಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ್ನು ಐಪಿಎಲ್ ಪಂದ್ಯಗಳ ಬಗ್ಗೆ ಅನಿಶ್ಚಿತತೆ ಎದುರಾಗಿದೆ. ಒಂದೊಮ್ಮೆ ಚಿನ್ನಸ್ವಾಮಿಯಲ್ಲಿ ಐಪಿಎಲ್ ಪಂದ್ಯಗಳು ರದ್ದಾದರೆ ಮುಂದಿನ ಆವೃತ್ತಿಯ ಫೈನಲ್ ಪಂದ್ಯದ ಆತಿಥ್ಯ ಕೂಡ ಕೈತಪ್ಪಲಿದೆ. ಹೌದು ಯಾವ ತಂಡ ಐಪಿಎಲ್ ಚಾಂಪಿಯನ್ ಆಗುತ್ತದ್ದೋ ಅವರ ತವರಿನಲ್ಲಿ ಮುಂದಿನ ಫೈನಲ್ ಪಂದ್ಯ ನಡೆಯುವುದು ವಾಡಿಕೆ. ಆದರೆ ಚಿನ್ನಸ್ವಾಮಿಯಲ್ಲಿ ಪಂದ್ಯ ಇಲ್ಲವಾದಲ್ಲಿ ಬೇರೆ ತಾಣಕ್ಕೆ ಫೈನಲ್ ಪಂದ್ಯದ ಆತಿಥ್ಯ ಸಿಗಲಿದೆ.
