ಉದಯವಾಹಿನಿ, ಢಾಕಾ: ಮುಹಮ್ಮದ್ ಯೂನಸ್ ನೇತೃತ್ವದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ಸರ್ಕಾರ ಅಸ್ಥಿರವಾಗಿದೆ. ಇದು ದೇಶವನ್ನು ಪಾಕಿಸ್ತಾನ ಶೈಲಿಯ ಮಿಲಿಟರಿ ಆಡಳಿತದ ಕಡೆಗೆ ದೂಡುತ್ತಿದೆ. ಇದನ್ನು ತಡೆಯುವುದು ಭಾರತದಿಂದ ಮಾತ್ರ ಸಾಧ್ಯ ಎಂದು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ. ಮಾಧ್ಯಮವೊಂದರ ಜೊತೆ ಮಾತನಾಡಿರುವ ಅವರು, ಭಾರತ ಬಾಂಗ್ಲಾದೇಶದ ಸ್ಥಿರ ಸ್ನೇಹಿತ ರಾಷ್ಟ್ರವಾಗಿದೆ. ಇಲ್ಲಿ ಪ್ರಜಾಪ್ರಭುತ್ವವನ್ನು ಉಳಿಸುವಲ್ಲಿ ಭಾರತ ಪ್ರಮುಖ ಪಾತ್ರವಹಿಸಬೇಕಿದೆ ಎಂದು ಅವರು ಹೇಳಿದ್ದಾರೆ.ಬಾಂಗ್ಲಾದೇಶಿಗಳು ತಮ್ಮದೇ ಆದ ಪ್ರಜಾಪ್ರಭುತ್ವ ಮಾದರಿಯ ಸರ್ಕಾರವನ್ನು ಆಯ್ಕೆ ಮಾಡುವಲ್ಲಿ ಭಾರತ ಬೆಂಬಲವನ್ನು ನೀಡಬೇಕು ಎಂದು ನಾವು ಕೇಳಿಕೊಳ್ಳುತ್ತೇವೆ ಎಂದಿರುವ ಹಸೀನಾ, ಬಾಂಗ್ಲಾದೇಶದಲ್ಲಿ ಪಾಕಿಸ್ತಾನ ಶೈಲಿಯ ಆಡಳಿತ ಜಾರಿಯಾಗದಂತೆ ತಡೆಯಲು ಭಾರತದ ಪಾತ್ರ ನಿರ್ಣಾಯಕವಾಗಿದೆ ಎಂದು ಅವರು ಹೇಳಿದ್ದಾರೆ.
ಬಾಂಗ್ಲಾದೇಶದ ಆಡಳಿತದ ಬಗ್ಗೆ ಕಳವಳವನ್ನು ವ್ಯಕ್ತಪಡಿಸುತ್ತಲೇ ಇರುವ ಅವರು, ಬಾಂಗ್ಲಾದೇಶದಲ್ಲಿ ಈಗ ಭೌಗೋಳಿಕ ರಾಜಕೀಯ ಪರಿಸ್ಥಿತಿಗಳು ಬದಲಾಗುತ್ತಿವೆ. ಹಿಂದಿನಿಂದಲೂ ಭಾರತವು ಬಾಂಗ್ಲಾದೇಶದ ಅತ್ಯುತ್ತಮ ಮಿತ್ರ ರಾಷ್ಟ್ರವಾಗಿದೆ. ಇದರಿಂದಾಗಿಯೇ ಬಾಂಗ್ಲಾದೇಶದಲ್ಲಿ ಸ್ಥಿರ, ಪ್ರಜಾಪ್ರಭುತ್ವ ಆಡಳಿತ ಇಂದಿಗೂ ಉಳಿದಿದೆ ಎಂದು ಅವರು ಹೇಳಿದ್ದಾರೆ. ಅಪಾಯದ ಕ್ಷಣದಲ್ಲಿ ಭಾರತ ನನ್ನನ್ನು ಸ್ವಾಗತಿಸಿದೆ. ಇದಕ್ಕಾಗಿ ನಾನು ಭಾರತೀಯರಿಗೆ ಕೃತಜ್ಞಳಾಗಿದ್ದೇನೆ ಎಂದಿರುವ ಅವರು, ಭಾರತದೊಂದಿಗೆ ಸಂಬಂಧ ಸ್ಥಾಪನೆಯಲ್ಲಿ ಯೂನಸ್ ಅವರು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಅವರ ಸ್ವಂತ ನೀತಿಗಳು ಕಾರಣ. ಅವರ ಉಗ್ರಗಾಮಿ ಯೋಜನೆಗಳು, ಧಾರ್ಮಿಕ ಅಲ್ಪಸಂಖ್ಯಾತರನ್ನು ರಕ್ಷಿಸುವಲ್ಲಿ ಅವರ ವೈಫಲ್ಯ, ಭಾರತ ವಿರೋಧಿ ಹೇಳಿಕೆಗಳು ಇದಕ್ಕೆ ಕಾರಣ ಎಂದು ಅವರು ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!