ಉದಯವಾಹಿನಿ, ಇಂದೋರ್: ಬಿಹಾರ ಚುನಾವಣಾ ಫಲಿತಾಂಶದ ಕುರಿತಾದ ರಾಜಕೀಯ ಚರ್ಚೆಯು ಕೌಟುಂಬಿಕ ವಾಗ್ವಾದವಾಗಿ ಮಾರ್ಪಟ್ಟಿದ್ದು, ಕೊನೆಗೆ ಕೊಲೆಯಲ್ಲಿ ಅಂತ್ಯವಾದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಗುಣ ಜಿಲ್ಲೆಯಲ್ಲಿ ನಡೆದಿದೆ. ಮಾವಂದಿರಿಬ್ಬರು ಸೇರಿ ತಮ್ಮ ಸೋದರಳಿಯನನ್ನು ಹತ್ಯೆ ಮಾಡಿದ್ದಾರೆ.
ಬಿಹಾರದ ಶಿವಹಾರ್ ಜಿಲ್ಲೆಯ ಕಾರ್ಮಿಕ 22 ವರ್ಷದ ಶಂಕರ್ ಮಾಂಝಿ ಮೃತ ದುರ್ದೈವಿ. ಮಾವಂದಿರಾದ ರಾಜೇಶ್ ಮಾಂಝಿ (25) ಮತ್ತು ತೂಫಾನಿ ಮಾಂಝಿ (27) ಹತ್ಯೆ ಆರೋಪಿಗಳು. ಶಂಕರ್ ತನ್ನ ಮಾವಂದಿರೊಂದಿಗೆ ವಾಸವಾಗಿದ್ದ ನಿರ್ಮಾಣ ಹಂತದ ಆವರಣದಲ್ಲಿ ಈ ಘಟನೆ ನಡೆದಿದೆ. ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಕೊಲೆಯಾದ ಶಂಕರ್, ಆರ್‌ಜೆಡಿ ಬೆಂಬಲಿಗ ಎಂದು ತಿಳಿದುಬಂದಿದೆ. ಆದರೆ ಇಬ್ಬರು ಆರೋಪಿಗಳು ಜೆಡಿ (ಯು) ಅನ್ನು ಬೆಂಬಲಿಸಿದ್ದಾರೆ ಎಂದು ಪೊಲೀಸ್ ಠಾಣೆಯ ಉಸ್ತುವಾರಿ ಅನೂಪ್ ಭಾರ್ಗವ ತಿಳಿಸಿದ್ದಾರೆ. ಹೀಗಾಗಿ ಮೂವರೂ ಕುಡಿದ ಮತ್ತಿನಲ್ಲಿ ಜಗಳವಾಡಿದ್ದಾರೆ. ಅದು ಕೊನೆಗೆ ದೈಹಿಕ ಜಗಳಕ್ಕೆ ತಿರುಗಿತು ಎಂದು ಪೊಲೀಸರು ಹೇಳಿದ್ದಾರೆ.
