ಉದಯವಾಹಿನಿ, ಗಾಂಧಿನಗರ : ಗುಜರಾತ್‌ನಲ್ಲಿ ನವೆಂಬರ್ 18ರಂದು ಭೀಕರ ದುರಂತವೊಂದು ನಡೆದಿದ್ದು, ಚಲಿಸುತ್ತಿದ್ದ ಆಂಬ್ಯಲೆನ್ಸ್‌ಗೆ ಬೆಂಕಿ ಹತ್ತಿಕೊಂಡು ನವಜಾತ ಶಿಶು, ವೈದ್ಯ ಸೇರಿ ನಾಲ್ವರು ಸಜೀವ ದಹನವಾಗಿದ್ದಾರೆ ಅರವಲ್ಲಿ ಜಿಲ್ಲೆಯ ಮೋಡಸಾ ಪಟ್ಟಣದಲ್ಲಿ ಈ ದುರಂತ ನಡೆದಿದೆ. ಆಸ್ಪತ್ರೆಯೊಂದರಲ್ಲಿ ಜನಿಸಿದ 1 ದಿನದ ಶಿಶುವಿನ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಅದನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಹಮದಾಬಾದ್‌ನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ದುರಂತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
ಮೃತರ ಪೈಕಿ ನವಜಾತ ಶಿಶು, ವೈದ್ಯ, ಮತ್ತು ಇತರ ಇಬ್ಬರು ಸೇರಿದ್ದಾರೆ. ಮೋಡಸಾ-ಧನ್ಸುರ ರಸ್ತೆಯಲ್ಲಿ ಅಂಬ್ಯುಲೆನ್ಸ್ ಸಾಗುತ್ತಿದ್ದಾಗ ಮಧ್ಯರಾತ್ರಿ ಸುಮಾರು 1 ಗಂಟೆ ವೇಳೆಗೆ ಅಂಬ್ಯಲೆನ್ಸ್‌ಗೆ ಬೆಂಕಿ ಹತ್ತಿಕೊಂಡಿತ್ತು. ಮೃತರನ್ನು 1 ದಿನದ ನವಜಾತ ಶಿಶು, ಅದರ ತಂದೆ ಜಿಗ್ನೇಶ್ ಮೋಚಿ (38), ಅಹಮಾದಾಬಾದ್‌ನ ವೈದ್ಯ ಶಾಂತಿಲಾಲ್ ತೆನಿಟಾ (30), ನರ್ಸ್ ಭುರಿಬೆನ್ ಮಾನತ್ (23) ಎಂದು ಗುರುತಿಸಲಾಗಿದೆ. ಚಾಲಕ ಅಚ್ಚರಿಯ ರೀತಿಯಲ್ಲಿ ಪಾರಾಗಿದ್ದಾನೆ. ಆಂಬ್ಯುಲೆನ್ಸ್ ಸುಟ್ಟು ಕರಕಲಾಗಿದೆ. ಗಾಯಗೊಂಡ ಮೂವರಲ್ಲಿ ಮೋಚಿಯ ಇಬ್ಬರು ಸಂಬಂಧಿಕರೂ ಇದ್ದಾರೆ. ಸುಟ್ಟ ಗಾಯಗಳೊಂದಿಗೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
