ಉದಯವಾಹಿನಿ, ನವದೆಹಲಿ:  ರಿಲಾಯನ್ಸ್ ಬೆಂಬಲಿತ ಡುಂಜೋ ಸಂಸ್ಥೆ ತನ್ನ ಹಣಕಾಸು ಸಂಕಷ್ಟ ಸರಿಪಡಿಸುವ ನಿಟ್ಟಿನಲ್ಲಿ ವೇತನಕಡಿತಕ್ಕೆ ಕೈಹಾಕಿದೆ. ಎಲ್ಲರಿಗೂ ಏಕ ರೀತಿಯಲ್ಲಿ ವೇತನ ಕಡಿತ ಮಾಡದೇ ಹೆಚ್ಚಿನ ಸಂಬಳದಾರರನ್ನು ಮಾತ್ರ ಗುರಿ ಮಾಡಲಾಗಿದೆ. ಮನಿಕಂಟ್ರೋಲ್​ನಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ, ಡುಂಜೋದಲ್ಲಿ ಯಾರೇ ಉದ್ಯೋಗಿಗಳಾಗಿದ್ದರೂ ಸಂಬಳಮಿತಿ 75,000 ರೂ ಎಂದು ನಿಗದಿ ಮಾಡಲಾಗಿದೆ . ಅದಕ್ಕಿಂತ ಹೆಚ್ಚಿನ ಸಂಬಳ ಪಡೆಯುತ್ತಿದ್ದವರಿಗೆ ಸಂಬಳಕಡಿತವಾಗಲಿದೆ. 75,000 ರೂಗಿಂತ ಕಡಿಮೆ ಸಂಬಳ ಪಡೆಯುತ್ತಿರುವವರಿಗೆ ಯಾವುದೇ ಕಡಿತ ಇರುವುದಿಲ್ಲ. ಈ ಕ್ರಮ ಕೇವಲ ತಾತ್ಕಾಲಿಕ ಮಾತ್ರ. ತುರ್ತು ಹಣಕಾಸು ಸಂಕಷ್ಟ ಎದುರಿಸಲು ಡುಂಜೋ ಸಂಬಳಮಿತಿ ನಿರ್ಧಾರ ಕೈಗೊಂಡಿದೆ. ವರದಿಯ ಪ್ರಕಾರ, ಶೇ. 50ರಷ್ಟು ಸಿಬ್ಬಂದಿಗೆ, ಅಂದರೆ 500 ಮಂದಿಗೆ ಮಾತ್ರ ಸಂಬಳಕಡಿತ ಇರಲಿದೆ. ಇದು ಜೂನ್ ತಿಂಗಳ ಸಂಬಳಕ್ಕೆ ಮಾತ್ರ ಆಗುವ ಕಡಿತ. ಆದರೆ, ಸಂಬಳಕಡಿತಗೊಂಡವರು ಹೆಚ್ಚು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಜುಲೈ 20ರೊಳಗೆ ಬಾಕಿ ಸಂಬಳವೆಲ್ಲವೂ ಜಮೆ ಆಗುತ್ತದೆ ಎಂದು ಹೇಳಲಾಗಿದೆ. ಸಂಬಳಕಡಿತವಾದವರಲ್ಲಿ ಎಲ್ಲರೂ ಹಿರಿಯ ಉದ್ಯೋಗಿಗಳೇ. ಈ ಕ್ರಮ ಕೈಗೊಳ್ಳುವ ಬಗ್ಗೆ ಯಾವುದೇ ಸಿಬ್ಬಂದಿಗೂ ಮುಂಚಿತವಾಗಿ ತಿಳಿಸಿರಲಿಲ್ಲ.

ಸಂಬಳ ಪಡೆಯುವ ದಿನದಂದು ಮಾತ್ರವೇ ಈ ಬಗ್ಗೆ ಮಾಹಿತಿ ನೀಡಲಾಗಿದೆ. ವರದಿಗಳ ಪ್ರಕಾರ ಡುಂಜೋ ಸಂಬಳಕಡಿತದ ನಿರ್ಧಾರ ಕೊನೆಯ ಕ್ಷಣದಲ್ಲಿ ತೆಗೆದುಕೊಂಡಿದ್ದು. ಸಂಬಳದ ದಿನ ಸಮೀಪಿಸುತ್ತಿರುವಂತೆಯೇ ವ್ಯವಹಾರ ಉದ್ದೇಶಕ್ಕೆ ತುರ್ತಾಗಿ ಹಣ ಬೇಕಕದ್ದರಿಂದ ಕಂಪನಿ ಅನಿವಾರ್ಯವಾಗಿ ಸಂಬಳಕಡಿತಕ್ಕೆ ಕೈಹಾಕಿದ್ದು ತಿಳಿದುಬಂದಿದೆ. ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಿರುವ ಡುಂಜೋ ಸಂಸ್ಥೆ ಆನ್​ಲೈನ್ ಆರ್ಡರ್ ಪಡೆದು ಮನೆಮನೆಗೆ ವಿವಿಧ ವಸ್ತುಗಳನ್ನು ಡೆಲಿವರಿ ಮಾಡುತ್ತದೆ. ಕೊರಿಯರ್, ಲಾಂಡ್ರಿ, ಔಷಧಿ ಇತ್ಯಾದಿಯನ್ನೂ ಡೆಲಿವರ್ ಮಾಡುತ್ತದೆ. ಬೆಂಗಳೂರಷ್ಟೇ ಅಲ್ಲದೇ ದೆಹಲಿ, ಗುರುಗ್ರಾಮ್, ಪುಣೆ, ಹೈದರಾಬಾದ್, ಚೆನ್ನೈ ಮತ್ತು ಮುಂಬೈನಲ್ಲೂ ಡುಂಜೋ ಕಾರ್ಯನಿರತವಾಗಿದೆ. ಗುರುಗ್ರಾಮ್​ನಲ್ಲಿ ಡುಂಜೋದಿಂದ ಬೈಕ್ ಟ್ಯಾಕ್ಸಿಯೂ ಇದೆ. 2022ರಲ್ಲಿ ರಿಲಾಯನ್ಸ್ ರೀಟೇಲ್ 240 ಮಿಲಿಯನ್ ಡಾಲರ್ ಮೊತ್ತಕ್ಕೆ ಡುಂಜೋದಲ್ಲಿ ಶೇ. 25.8ರಷ್ಟು ಪಾಲು ಖರೀದಿಸಿದೆ. ಇಷ್ಟಾದರೂ ಡುಂಜೋಗೆ ನಿರೀಕ್ಷಿತ ಆದಾಯ ಬರದೇ ಹಣಕಾಸು ಸಂಕಷ್ಟ ಮುಂದುವರಿದಿದೆ. ಈ ವರ್ಷ ಎರಡು ಸುತ್ತುಗಳಲ್ಲಿ ಅದು ಉದ್ಯೋಗಿಗಳ ಲೇ ಆಫ್ ಮಾಡಿದೆ. ಒಟ್ಟು 380 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!