ಉದಯವಾಹಿನಿ, ಚಳಿಗಾಲದಲ್ಲಿ ದೇಹದ ಆರೋಗ್ಯವನ್ನು ಕಾಯ್ದುಕೊಳ್ಳಲು ನಿಮ್ಮ ಆಹಾರದ ಕ್ರಮದ ಬಗ್ಗೆ ವಿಶೇಷವಾದ ಕಾಳಜಿಯನ್ನು ವಹಿಸಬೇಕಾಗುತ್ತದೆ. ಅನೇಕರು ಚಳಿಗಾಲದಲ್ಲಿ ರಾಗಿ, ಗೋಧಿ, ಜೋಳ, ಸಜ್ಜೆ ಸೇರಿದಂತೆ ವಿವಿಧ ಧಾನ್ಯಗಳು ರೊಟ್ಟಿ ಮತ್ತು ಚಪಾತಿಗಳನ್ನು ಸೇವನೆ ಮಾಡುತ್ತಾರೆ. ಹಾಗಾದರೆ, ಚಳಿಗಾಲದಲ್ಲಿ ಯಾವ ಧಾನ್ಯಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿದುಕೊಳ್ಳಬೇಕಾಗುತ್ತದೆ.
ದೈನಂದಿನ ಆಹಾರದ ಕ್ರಮದಲ್ಲಿ ಕಾಲೋಚಿತ ಹಣ್ಣುಗಳು, ತರಕಾರಿಗಳು ಹಾಗೂ ಧಾನ್ಯಗಳನ್ನು ಸೇರಿಸುವುದು ಆರೋಗ್ಯಕ್ಕೆ ಉತ್ತಮವಾದ ಆಯ್ಕೆಯಾಗಿದೆ. ಇವು ಋತುಮಾನದ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯವಾಗುತ್ತದೆ.
ಚಳಿಗಾಲ ಆರಂಭವಾಗುತ್ತಿದ್ದಂತೆ ದೇಹದ ಚಯಾಪಚಯ ಕ್ರಿಯೆ ದುರ್ಬಲಗೊಳ್ಳುತ್ತದೆ. ಇದು ಶಕ್ತಿಯ ಮಟ್ಟವನ್ನು ಕಡಿಮೆ ಮಾಡುತ್ತದೆ. ಅನೇಕ ಜನರು ಚಳಿಗಾಲದಲ್ಲಿ ಮಲಬದ್ಧತೆಯಿಂದ ಬಳಲುತ್ತಾರೆ ಹಾಗೂ ರೋಗನಿರೋಧಕ ಶಕ್ತಿಯೂ ಕಡಿಮೆಯಾಗುತ್ತದೆ. ಈ ರೀತಿ ಆರೋಗ್ಯದ ಸಮಸ್ಯೆಗಳನ್ನು ತಪ್ಪಿಸಲು ಕೆಲವು ಕಾಲೋಚಿತ ಆಹಾರದ ಕ್ರಮಗಳನ್ನು ಪಾಲಿಸಬೇಕಾಗುತ್ತದೆ. ಚಳಿಗಾಲದಲ್ಲಿ ಯಾವೆಲ್ಲಾ ಧಾನ್ಯಗಳ ರೊಟ್ಟಿ ಹಾಗೂ ಚಪಾತಿಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎಂಬುದನ್ನು ಇಲ್ಲಿ ತಿಳಿಯೋಣ.
ಪೌಷ್ಟಿಕತಜ್ಞರಾದ ಕಿರಣ್ ಕುಕ್ರೇಜಾ ಅವರು, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಚಳಿಗಾಲ ಮತ್ತು ಬೇಸಿಗೆಯಲ್ಲಿ ತಿನ್ನುವ ರೊಟ್ಟಿ, ಚಪಾತಿಗಳ ಬಗ್ಗೆ ವಿವರವಾಗಿ ತಿಳಿಸಿದ್ದಾರೆ. ಈ ಧಾನ್ಯಗಳನ್ನು ಸರಿಯಾದ ರೀತಿಯಲ್ಲಿ ಸೇವಿಸುವುದರಿಂದ ಆರೋಗ್ಯಕ್ಕೂ ತುಂಬಾ ಪ್ರಯೋಜನ ದೊರೆಯುತ್ತದೆ ಎಂದು ತಿಳಿಸುತ್ತಾರೆ.
ರಾಗಿ ರೊಟ್ಟಿ: ಆಯುರ್ವೇದದಲ್ಲಿ ರಾಗಿಗೆ ಹೆಚ್ಚು ಉಪಯುಕ್ತವಾದ ಧಾನ್ಯವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ರಾಗಿ ಚಪಾತಿ ಸೇವಿಸುವುದರಿಂದ ಚಳಿಗಾಲದಲ್ಲಿ ತುಂಬಾ ಪ್ರಯೋಜನಕಾರಿ. ರಾಗಿಯಲ್ಲಿ ಕ್ಯಾಲ್ಸಿಯಂ, ರಂಜಕ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿದೆ. ಇದು ಮೂಳೆಗಳನ್ನು ಬಲಪಡಿಸುತ್ತದೆ. ಚಳಿಗಾಲದಲ್ಲಿ ಮೂಳೆ ಹಾಗೂ ಕೀಲು ನೋವು ಸಾಮಾನ್ಯವಾಗಿದೆ. ಪ್ರತಿದಿನ ರಾಗಿ ಚಪಾತಿ ಇಲ್ಲವೇ ರೊಟ್ಟಿ ಹಾಗೂ ರಾಗಿ ಗಂಜಿಯನ್ನು ತಯಾರಿಸಿ ಸೇವನೆ ಮಾಡುವುದರಿಂದ ಮೂಳೆಗಳು ಸದೃಢವಾಗುತ್ತವೆ. ರಾಗಿಯಲ್ಲಿ ಪ್ರೋಟೀನ್ ಹಾಗೂ ಕಾರ್ಬೋಹೈಡ್ರೇಟ್‌ಗಳು ಇವೆರಡೂ ಇರುತ್ತವೆ. ರಾಗಿಯು ಶಕ್ತಿಯನ್ನು ಒದಗಿಸುತ್ತದೆ ಹಾಗೂ ದೈಹಿಕ ಕಾರ್ಯಗಳನ್ನು ನಿಯಂತ್ರಿಸುತ್ತದೆ. ರಾಗಿಯಲ್ಲಿ ಫೈಬರ್, ಕಾರ್ಬೋಹೈಡ್ರೇಟ್‌ಗಳು, ವಿಟಮಿನ್ ಬಿ, ಕ್ಯಾಲ್ಸಿಯಂ, ಕಬ್ಬಿಣ, ಪೊಟ್ಯಾಸಿಯಮ್, ತಾಮ್ರ, ಮೆಗ್ನೀಸಿಯಮ್, ಪ್ರೋಟೀನ್ ಹೇರಳವಾಗಿದೆ. ರಾಗಿ ಸೇವನೆಯು ಮೂಳೆಗಳನ್ನು ಬಲಪಡಿಸುವುದಲ್ಲದೆ ತೂಕ ಇಳಿಸುವವರಿಗೂ ಉತ್ತಮವಾಗಿದೆ. ರಾಗಿ ಚಪಾತಿಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತದೆ. ಇದು ದೇಹದಿಂದ ಹಾನಿಕಾರಕ ವಿಷ ತೆಗೆದುಹಾಕುವ ಕೆಲಸ ಮಾಡುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
