ಉದಯವಾಹಿನಿ, ನವದೆಹಲಿ : ದುಬೈನಲ್ಲಿ ಶುಕ್ರವಾರ ನಡೆದ ವಾಯು ಪ್ರದರ್ಶನದಲ್ಲಿ ಭಾರತೀಯ ವಾಯುಪಡೆಯ ಯುದ್ಧ ವಿಮಾನ ಅಪಘಾತಕ್ಕೀಡಾಗಿದ್ದು, ಪೈಲಟ್ ನಮಾಂಶ್ ಸಯಾಲ್ ಸಾವನ್ನಪ್ಪಿದ್ದಾರೆ. ಅಪಘಾತಕ್ಕೂ ಮುನ್ನ ನಮಾಂಶ್ ಸಯಾಲ್ ಅವರಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಅಲ್ ಮಕ್ತೌಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಡೆದ ದುಬೈ ಏರ್ ಶೋನಲ್ಲಿ ಹಾರಾಟ ಸಮಯದಲ್ಲಿ ತೇಜಸ್ ಯುದ್ಧ ವಿಮಾನ ಅಪಘಾತಕ್ಕೀಡಾಯಿತು. 34 ವರ್ಷದ ಪೈಲಟ್ ನಮಾಂಶ್ ಸಯಾಲ್ ಅವರು ಪತ್ನಿ, ಮಗಳು ಮತ್ತು ಪೋಷಕರನ್ನು ಅಗಲಿದ್ದಾರೆ.
ದುಬೈ ವಾಯು ಪ್ರದರ್ಶನದ ಸಮಯದಲ್ಲಿ ನಮಾಂಶ್ ಸಯಾಲ್ ಅವರು ಹಾರಿಸುತ್ತಿದ್ದ ತೇಜಸ್ ಯುದ್ಧ ವಿಮಾನ ಅಪಘಾತಕ್ಕೀಡಾಗಿದೆ. ಈ ವೇಳೆ ವಿಂಗ್ ಕಮಾಂಡರ್ ನಮಾಂಶ್ ಸಯಾಲ್ ಸಾವನ್ನಪ್ಪಿದ್ದಾರೆ. ಇದಕ್ಕೂ ಮೊದಲು ನಮಾಂಶ್ ಸಯಾಲ್ ಅವರನ್ನು ತೋರಿಸುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೊದಲ್ಲಿ ರಕ್ಷಣಾ ರಾಜ್ಯ ಸಚಿವ ಸಂಜಯ್ ಸೇಠ್, ಯುಎಇಯ ಭಾರತದ ರಾಯಭಾರಿ ದೀಪಕ್ ಮಿತ್ತಲ್, ವಿದೇಶಾಂಗ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ (ಗಲ್ಫ್) ಅಸೀಮ್ ಆರ್. ಮಹಾಜನ್ ಅವರೊಂದಿಗೆ ವಿಂಗ್ ಕಮಾಂಡರ್ ನಮಾಂಶ್ ಸಯಾಲ್ ಕಾಣಿಸಿಕೊಂಡಿದ್ದಾರೆ.
