ಉದಯವಾಹಿನಿ, ನವದೆಹಲಿ: ಕೇಂದ್ರ ದೆಹಲಿಯ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಐವರು ವಿದ್ಯಾರ್ಥಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಶಾಲೆಯ ಸಿಸಿಟಿವಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ನವೆಂಬರ್ 18ರಂದು ಸೇಂಟ್ ಕೊಲಂಬಸ್ ಶಾಲೆಯ ವಿದ್ಯಾರ್ಥಿ ಶೌರ್ಯ ಪಾಟೀಲ್ ರಾಜೇಂದ್ರ ಪ್ಲೇಸ್ ಮೆಟ್ರೋ ನಿಲ್ದಾಣದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿ ಆತನ ಐವರು ಸಹಪಾಠಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕೆಲವು ಶಿಕ್ಷಕರು ವಿದ್ಯಾರ್ಥಿಗೆ ಅವಮಾನ ಮಾಡಿದ್ದಾರೆ ಎನ್ನುವುದು ಬೆಳಕಿಗೆ ಬಂದಿದೆ.
ಕೊಲಂಬಾ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಶೌರ್ಯ ಪಾಟೀಲ್ ನವೆಂಬರ್ 18ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಆತನ ತಂದೆ ಪ್ರದೀಪ್ ಪಾಟೀಲ್ ಪೊಲೀಸರಿಗೆ ದೂರು ನೀಡಿದ್ದಾರೆ. ಇದರ ಪ್ರಕಾರ ಶಿಕ್ಷಕರು ತನ್ನ ಮಗನಿಗೆ ಬೆದರಿಕೆ ಹಾಕಿದ್ದಾರೆ. ಪೋಷಕರಿಗೆ ಕರೆ ಮಾಡಿ ವರ್ಗಾವಣೆ ಪ್ರಮಾಣಪತ್ರ ನೀಡುವುದಾಗಿ ಹೇಳಿದ್ದಾರೆ ಎಂದು ಸಹಪಾಠಿಗಳು ಹೇಳಿದ್ದರು. ಶಿಕ್ಷಕರಲ್ಲಿ ಒಬ್ಬರು ಹುಡುಗನನ್ನು ತಳ್ಳಿದ್ದಾರೆ ಎಂದು ಕೂಡ ಎಫ್‌ಐಆರ್ ನಲ್ಲಿ ತಿಳಿಸಲಾಗಿದೆ.
ನವೆಂಬರ್ 18 ರಂದು ಬೆಳಗ್ಗೆ 7.15 ಕ್ಕೆ ಗೋಲ್ ಮಾರ್ಕೆಟ್‌ನಲ್ಲಿರುವ ಶಾಲೆಗೆ ಹೊರಟಿದ್ದ ಶೌರ್ಯ ಸಾವನ್ನಪ್ಪಿರುವುದು ಮಧ್ಯಾಹ್ನ 2.45ಕ್ಕೆ ತಿಳಿದು ಬಂದಿದೆ. ಮಹಾರಾಷ್ಟ್ರದ ಕೊಲ್ಲಾಪುರದಲ್ಲಿದ್ದ ಅವರ ತಂದೆ ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ. ಆತನನ್ನು ಬಿಎಲ್‌ಕೆ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ವಿದ್ಯಾರ್ಥಿಯು ಪ್ಲಾಟ್‌ಫಾರ್ಮ್ ಸಂಖ್ಯೆ 2 ರಿಂದ ಹಾರಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
