ಉದಯವಾಹಿನಿ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಟೂರ್ನಿಯಲ್ಲಿನ ಭಾರತ ಎ ತಂಡದ ಅಭಿಯಾನ ಅಂತ್ಯಗೊಂಡಿದೆ. ದೋಹಾದಲ್ಲಿ ನಡೆಯುತ್ತಿರುವ ಈ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮುಗ್ಗರಿಸುವ ಮೂಲಕ ಟೀಮ್ ಇಂಡಿಯಾ ಪಂದ್ಯಾವಳಿಯಿಂದ ಹೊರಬಿದ್ದಿದೆ. ಈಸ್ಟ್ ಎಂಡ್ ಪಾರ್ಕ್ನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಎ ಮತ್ತು ಬಾಂಗ್ಲಾದೇಶ್ ಎ ತಂಡಗಳು ಮುಖಾಮುಖಿಯಾಗಿದ್ದವು.ಈ ನಿರ್ಣಾಯಕ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ್ ಎ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 194 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಭಾರತ ಎ ತಂಡವು 20 ಓವರ್ಗಳಲ್ಲಿ 194 ರನ್ಗಳಿಸಿ ಪಂದ್ಯವನ್ನು ಟೈ ಮಾಡಿಕೊಂಡಿದ್ದರು.
ಪಂದ್ಯ ಟೈ ಆದ ಹಿನ್ನಲೆ ಫಲಿತಾಂಶಕ್ಕಾಗಿ ಸೂಪರ್ ಓವರ್ ಆಡಿಸಲಾಯಿತು. ಸೂಪರ್ ಓವರ್ನ ಮೊದಲ ಎಸೆತದಲ್ಲೇ ಜಿತೇಶ್ ಶರ್ಮಾ (0) ಕ್ಲೀನ್ ಬೌಲ್ಡ್ ಆದರು. ಇನ್ನು ಮರು ಎಸೆತದಲ್ಲಿ ಅಶುತೋಷ್ ಶರ್ಮಾ (0) ಕೂಡ ಕ್ಯಾಚ್ ನೀಡಿ ಔಟಾದರು. ಸೂಪರ್ ಓವರ್ನಲ್ಲಿ ಶೂನ್ಯಕ್ಕೆ ಆಲೌಟ್ ಆಗುವ ಮೂಲಕ ಟೀಮ್ ಇಂಡಿಯಾ ಬಾಂಗ್ಲಾದೇಶ್ ಎ ತಂಡಕ್ಕೆ 1 ರನ್ಗಳ ಗುರಿ ನೀಡಿದರು. ಈ ಸುಲಭ ಗುರಿಯನ್ನು ಬೆನ್ನತ್ತಲು ಬಂದ ಬಾಂಗ್ಲಾ ಬ್ಯಾಟರ್ ಯಾಸಿರ್ ಅಲಿ ಮೊದಲ ಎಸೆತದಲ್ಲೇ ಔಟಾಗಿದ್ದರು. ಆದರೆ ಸುಯಶ್ ಶರ್ಮಾ ಎಸೆದ ದ್ವಿತೀಯ ಎಸೆತವು ವೈಡ್ ಆಯಿತು. ಈ ವೈಡ್ ರನ್ನೊಂದಿಗೆ ಗೆದ್ದ ಬಾಂಗ್ಲಾದೇಶ್ ತಂಡವು ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಟೂರ್ನಿಯಲ್ಲಿ ಫೈನಲ್ಗೇರಿದೆ.
