ಉದಯವಾಹಿನಿ ಬೆಳಗಿನ ಉಪಹಾರಕ್ಕೆ ಇಡ್ಲಿ, ವಡಾ, ದೋಸೆ, ಬೋಂಡಾ, ಪಡ್ಡುಗಳಂತಹ ವಿವಿಧ ರೆಸಿಪಿಗಳನ್ನು ತಯಾರಿಸುತ್ತೇವೆ. ಇನ್ನು ಚಟ್ನಿಯ ವಿಷಯಕ್ಕೆ ಬಂದಾಗ, ಶೇಂಗಾ ಚಟ್ನಿ ಮತ್ತು ತೆಂಗಿನಕಾಯಿ ಚಟ್ನಿಯನ್ನು ಸಿದ್ಧಪಡಿಸುತ್ತೇವೆ. ಹೊಸ ಬಗೆಯ ಚಟ್ನಿಗಳನ್ನು ತಯಾರಿಸಲು ನಾವು ಆಸಕ್ತಿ ತೋರಿಸುವುದಿಲ್ಲ. ಹೀಗಾಗಿ, ನಾವಿಂದು ಅದ್ಭುತ ರುಚಿಯ ಚಟ್ನಿ ರೆಸಿಪಿಯನ್ನು ತಂದಿದ್ದೇವೆ. ಅದುವೇ, ಬಾಯಲ್ಲಿ ನೀರೂರಿಸುವ ಈರುಳ್ಳಿ ಟೊಮೆಟೊ ಚಟ್ನಿ.
ತಾಜಾ ಹಾಗೂ ರುಚಿಕರವಾದ ಈ ಚಟ್ನಿ ಎಲ್ಲ ಟಿಫಿನ್‌ಗಳಿಗೂ ಸರಿಹೊಂದುತ್ತದೆ. ಅಲ್ಲದೇ, ಈ ಚಟ್ನಿಯನ್ನು ಬಹಳ ಕಡಿಮೆ ಸಮಯದಲ್ಲಿ ಸಿದ್ಧಪಡಿಸಬಹುದು. ಟಿಫಿನ್‌ಗಳಲ್ಲಿ ಮಾತ್ರವಲ್ಲದೇ, ಬಿಸಿ ಬಿಸಿಯಾದ ಅನ್ನದೊಂದಿಗೆ ಸೇವಿಸಿದರೂ ಸಖತ್​ ಆಗಿರುತ್ತದೆ.
ಮಧ್ಯಮ ಗಾತ್ರ ಈರುಳ್ಳಿ – ಆರು, ಮಧ್ಯಮ ಗಾತ್ರ ಟೊಮೆಟೊ – ಆರು, ಎಣ್ಣೆ – ಮೂರರಿಂದ ನಾಲ್ಕು ಟೀಸ್ಪೂನ್, ಧನಿಯಾ ಪುಡಿ – ನಾಲ್ಕು ಟೀಸ್ಪೂನ್
ಸಾಸಿವೆ – ಒಂದು ಟೀಸ್ಪೂನ್, ಜೀರಿಗೆ – ಒಂದು ಟೀಸ್ಪೂನ್, ಮೆಂತ್ಯೆ ಬೀಜ – ಒಂದು ಟೀಸ್ಪೂನ್, ಒಣಮೆಣಸಿನಕಾಯಿ – 15 (ನಿಮಗೆ ಇಷ್ಟವಾದಷ್ಟು)
ಶುಂಠಿ – ಎರಡು ಲವಂಗ (ಐಚ್ಛಿಕ), ಉಪ್ಪು – ರುಚಿಗೆ ತಕ್ಕಷ್ಟು, ಎಲ್ಲ ಟಿಫಿನ್‌ಗಳಿಗೆ ಚೆನ್ನಾಗಿ ಹೊಂದಿಕೊಳ್ಳುವ ಈರುಳ್ಳಿ ಟೊಮೆಟೊ ಚಟ್ನಿಯನ್ನು ತಯಾರಿಸಲು, ಮೊದಲಿಗೆ ಈರುಳ್ಳಿ ಹಾಗೂ ಟೊಮೆಟೊಗಳನ್ನು ಸ್ವಚ್ಛವಾಗಿ ತೊಳೆದು ಹಾಗೂ ಮಧ್ಯಮ ಗಾತ್ರದ ತುಂಡುಗಳಾಗಿ ಕತ್ತರಿಸಿ ಪಕ್ಕಕ್ಕೆ ಇಡಿ.
ಈಗ ಒಲೆಯ ಮೇಲೆ ಪ್ಯಾನ್ ಹಾಕಿ ಮೂರರಿಂದ ನಾಲ್ಕು ಟೀಸ್ಪೂನ್ ಎಣ್ಣೆಯನ್ನು ಸೇರಿಸಿ ಬಿಸಿ ಮಾಡಿ.
ಎಣ್ಣೆ ಬಿಸಿಯಾದ ಬಳಿಕ ಧನಿಯಾ ಪುಡಿ, ಜೀರಿಗೆ, ಸಾಸಿವೆ ಮತ್ತು ಮೆಂತ್ಯ ಬೀಜಗಳನ್ನು ಸೇರಿಸಿ ಹಾಗೂ ಎಲ್ಲವನ್ನೂ ಕಡಿಮೆ ಉರಿಯಲ್ಲಿ ಸ್ವಲ್ಪ ಸಮಯದವರೆಗೆ ಹುರಿಯಿರಿ. ಅವು ಸ್ವಲ್ಪ ಹುರಿದ ಬಳಿಕ, ರುಚಿಗೆ ತಕ್ಕಂತೆ ಕತ್ತರಿಸಿದ ಒಣ ಮೆಣಸಿನಕಾಯಿಗಳನ್ನು ಸೇರಿಸಿ ಮತ್ತು ಒಂದು ಚಮಚದೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
ಒಣಮೆಣಸಿನಕಾಯಿಗಳು ಕೂಡ ಹುರಿದ ಬಳಿಕ, ಕತ್ತರಿಸಿದ ಈರುಳ್ಳಿ ತುಂಡುಗಳು ಹಾಗೂ ಶುಂಠಿ ತುಂಡುಗಳನ್ನು ಸೇರಿಸಿ, ಹಸಿ ವಾಸನೆ ಹೋಗುವವರೆಗೆ ಮೂರು ನಿಮಿಷಗಳ ಕಾಲ ಹುರಿಯಿರಿ.
ಈರುಳ್ಳಿ ಸ್ವಲ್ಪ ಹುರಿದ ಬಳಿಕ, ಕತ್ತರಿಸಿದ ಟೊಮೆಟೊ ತುಂಡುಗಳು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಒಮ್ಮೆ ಮುಚ್ಚಿ.
ಬಳಿಕ ಒಲೆಯನ್ನು ಕಡಿಮೆ ಉರಿಯಲ್ಲಿ ಇರಿಸಿ ಹಾಗೂ ಟೊಮೆಟೊ ಚೆನ್ನಾಗಿ ಬೇಯುವವರೆಗೆ ಬೇಯಿಸಿ, ಈ ನಡುವೆ ಮುಚ್ಚಳವನ್ನು ತೆಗೆದುಹಾಕಿ.
ಟೊಮೆಟೊ ಚೆನ್ನಾಗಿ ಬೆಂದ ಬಳಿಕ ಹಾಗೂ ಮೃದುವಾದ ನಂತರ, ಒಲೆಯನ್ನು ಆಫ್ ಮಾಡಿ ಮತ್ತು ಮಿಶ್ರಣವನ್ನು ಸ್ವಲ್ಪ ತಣ್ಣಗಾಗಲು ಬಿಡಿ.
ಬಳಿಕ ಮಿಕ್ಸರ್ ಜಾರ್ ತೆಗೆದುಕೊಂಡು ತಣ್ಣಗಾದ ಟೊಮೆಟೊ ತುಂಡುಗಳನ್ನು ಸೇರಿಸಿ ನಿಧಾನವಾಗಿ ಮಿಶ್ರಣ ಮಾಡಿ.
ಬಳಿಕ ರುಬ್ಬಿದ ಚಟ್ನಿಯನ್ನು ಮಿಕ್ಸಿಂಗ್ ಬೌಲ್‌ಗೆ ತೆಗೆದುಕೊಳ್ಳಿ.
ಒಗ್ಗರಣೆಗಾಗಿ ಬೇಕಾಗುವ ಪದಾರ್ಥಗಳು:

ಎಣ್ಣೆ – ಸಾಕಷ್ಟು
ಸಾಸಿವೆ, ಜೀರಿಗೆ, ಉದ್ದಿನಬೇಳೆ, ಕಡಲೆಬೇಳೆ – ಎರಡು ಟೀಸ್ಪೂನ್
ಕರಿಬೇವು – ಸ್ವಲ್ಪ
ಒಣ ಮೆಣಸಿನಕಾಯಿ – ಮೂರು
ಬೆಳ್ಳುಳ್ಳಿ ಎಸಳು – ನಾಲ್ಕರಿಂದ ಐದು
ಒಗ್ಗರಣೆಗಾಗಿ ಒಲೆಯ ಮೇಲೆ ಸಣ್ಣ ಕಡಾಯಿ ಇಟ್ಟು ಅದರೊಳಗೆ ಎಣ್ಣೆಯನ್ನು ಬಿಸಿ ಮಾಡಿ. ಎಣ್ಣೆ ಬಿಸಿಯಾದ ಬಳಿಕ ಸಾವಿವೆ, ಜೀರಿಗೆ, ಉದ್ದಿನಬೇಳೆ, ಕಡಲೆಬೇಳೆ ಸೇರಿಸಿ ಹುರಿಯಿರಿ.
ನಂತರ ಕರಿಬೇವು ಎಲೆಗಳು, ಒಣ ಮೆಣಸಿನಕಾಯಿ, ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ ಎಸಳುಗಳನ್ನು ಸೇರಿಸಿ ಮತ್ತು ಒಗ್ಗರೆಣೆಯನ್ನು ಚೆನ್ನಾಗಿ ಹುರಿಯಿರಿ.
ಇದು ಚೆನ್ನಾಗಿ ಬೆಂದ ನಂತರ, ಒಲೆ ಆಫ್ ಮಾಡಿ ಮತ್ತು ಹಿಂದೆ ತಯಾರಿಸಿದ ಚಟ್ನಿಯೊಳಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕಾಗುತ್ತದೆ. ಇದೀಗ ಸೂಪರ್ ಟೇಸ್ಟಿಯಾದ ಈರುಳ್ಳಿ ಟೊಮೆಟೊ ಚಟ್ನಿ ಸಿದ್ಧ.

Leave a Reply

Your email address will not be published. Required fields are marked *

error: Content is protected !!